
ಬೆಳಗಾವಿ/ಧಾರವಾಡ/ಬಾಗಲಕೋಟೆ ಅ.೧೪: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಡೆಯುತ್ತಿರುವ ಹೋರಾಟ ೨ ನೇ ದಿನವೂ ಮುಂದುವರೆದಿದೆ.
ಪ್ರತಿ ಟನ್ ಕಬ್ಬಿಗೆ ಕನಿಷ್ಠ ೫,೫೦೦ ರೂ. ದರ ನಿಗದಿ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳ, ರಾಜ್ಯದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಎಥೆನಾಲ್ ಖರೀದಿ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಲು ಪಟ್ಟುಹಿಡಿದು ರಾಜ್ಯದ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಅಹೋರಾತ್ರಿ ಧರಣಿ ಮುಂದುವರೆಸಿರುವ ಅನ್ನದಾತರು ಎರಡನೇ ದಿನವಾದ ಇಂದು ಕೂಡ ತಮ್ಮ ಹೋರಾಟ ಮುಂದುವರೆಸಿದರು.
ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ದರ ಘೋಷಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡುವುದಾಗಿ ರೈತ ಸಂಘಟನೆಗಳು ಕಟುವಾಗಿ ಎಚ್ಚರಿಸಿವೆ.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಪ್ಲಾಜಾ ಸೇರಿದಂತೆ ಹಿರೆಬಾಗೇವಾಡಿ ಮತ್ತು ಕೊಗ್ಗನೊಳ್ಳಿ ಚೆಕ್ ಪೋಸ್ಟ್ಗಳಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ-೪೮ ತಡೆದು ಪ್ರತಿಭಟನೆ ನಡೆಸಿದ್ದಾರೆ. ರೈತರು ಹೆದ್ದಾರಿಯಲ್ಲೇ ರಾತ್ರಿ ಕಳೆದಿದ್ದು,ಇಂದು ಬೆಳಿಗ್ಗೆಯೂ ತಮ್ಮ ಹೋರಾಟ ಮುಂದುವರೆಸಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ರೈತರ ಹೋರಾಟ ಮುಂದುವರೆಸಿರುವ ಹಿನ್ನೆಲೆಯಲ್ಲಿ ಹೆದ್ದಾರಿಯುದ್ದಕ್ಕೂ ಕಿಲೋಮೀಟರ್ಗಟ್ಟಲೆ ಸರಕು ವಾಹನಗಳು ನಿಂತುಬಿಟ್ಟಿವೆ.
ಬೆಳಗಾವಿಯಲ್ಲಿ ಹೆದ್ದಾರಿ ಸಂಪೂರ್ಣ ಸ್ತಬ:
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪೮ರ ಹತ್ತರಗಿ, ಕುಗನೊಳ್ಳಿ ಮತ್ತು ಹಿರೇಬಾಗೇವಾಡಿ ಟೋಲ್ ಗೇಟ್ಗಳ ಬಳಿ ಸಾವಿರಾರು ರೈತರು ಹೆದ್ದಾರಿಯಲ್ಲೇ ಮಲಗಿ ಅಹೋರಾತ್ರಿ ಧರಣಿ ನಡೆಸಿದ್ದು, ರಸ್ತೆ ಬದಿಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿರುವ ರೈತರು, ಇಂದು ಕೂಡ ಹೆದ್ದಾರಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿದ್ದಾರೆ.
ಹಿರೇಬಾಗೇವಾಡಿ ಬಳಿ ನೂರಾರು ಟ್ರಕ್ಗಳು ಮತ್ತು ಖಾಸಗಿ ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿವೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಸಂಚರಿಸಲು ಯತ್ನಿಸಿದ ಗುಜರಾತ್ ಟ್ರಾವೆಲ್ಸ್ ಬಸ್ ಸೇರಿದಂತೆ ಹಲವು ವಾಹನಗಳನ್ನು ರೈತರು ತಡೆದು ವಾಪಸ್ ಕಳುಹಿಸಿದರು. ಇದೇ ವೇಳೆ ಹುಕ್ಕೇರಿ ಟೋಲ್ ನಾಕಾ ಬಳಿ ಕಬ್ಬಿಗೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಆಕ್ರೋಶಗೊಂಡ ಯುವ ರೈತನೊಬ್ಬ ಟೋಲ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಆತನನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆಯಲ್ಲಿ ಉಗ್ರ ಹೋರಾಟ :
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದಲ್ಲೂ ಇದೇ ರೀತಿಯ ಪ್ರತಿಭಟನೆ ಮುಂದುವರೆದಿದ್ದು,ರೈತರು ದರ ನಿಗದಿ ಆಗುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಗಡುವು ನೀಡಿದ್ದು, ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕರೆ ನೀಡಿರುವ ಹೆದ್ದಾರಿ ಬಂದ್ ಎರಡನೇ ದಿನವೂ ಮುಂದುವರೆದಿದೆ.
ಧಾರವಾಡ ಹೊರವಲಯದ ಬೈಪಾಸ್ ರಸ್ತೆಯಲ್ಲಿ ರೈತರು ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಬಂಧಿಸಿ ಧರಣಿ ಕುಳಿತರು. ಸತತ ೧೧ ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು, ರೋಗಿಗಳು ಹಾಗೂ ಸರಕು ಸಾಗಣೆ ವಾಹನಗಳ ಚಾಲಕರು ರಸ್ತೆಯಲ್ಲೇ ಸಿಲುಕಿ ತೀವ್ರ ಪರದಾಟ ಅನುಭವಿಸಿದರು.
ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಅ.೧೨ರಂದು ರೈತರ ಸಭೆ ನಡೆದಿತ್ತು. ಆದರೆ ಅಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರದಿರುವುದರಿಂದ ಸಭೆ ವಿಫಲವಾಗಿದೆ ಎಂದು ರೈತ ಸಂಘಟನೆಗಳು ಹೇರಿರುವ ರಾಷ್ಟ್ರೀಯ ಹೆದ್ದಾರಿ ೪ರ ಬಂದ್ ಇಂದೂ ಮುಂದುವರೆದಿದೆ.
ಕೇಂದ್ರ ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ರೈತರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಧಾರವಾಡದ ಯರಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಧಾರವಾಡ, ಅಳ್ನಾವರ, ಕಲಘಟಗಿ ಸೇರಿದಂತೆ ಅನೇಕ ತಾಲೂಕುಗಳ ಕಬ್ಬು ಬೆಳೆಗಾರರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ.
ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ನ್ನು ತಡೆದು ರೈತರು ಹೋರಾಟ ಮಾಡಿದರು. ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿತ್ತು.ಆದರೆ ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶಗೊಂಡಿರುವ ರೈತರು ಹೋರಾಟವನ್ನು ಮುಂದುವರೆಸಿದ್ದಾರೆ.
ಈ ಮಧ್ಯೆ ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ನಡೆಯುತ್ತಿದ್ದ ಬಂದ್ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನಪ್ಪ ಪೂಜಾರಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಈಡೇರಿಗಾಗಿ ಗಡುವು ನೀಡಿದ್ದರು.ಆದರೆ ಕೇಂದ್ರದಿಂದ ಯಾವುದೇ ಸ್ಪಂದನೆ ದೊರಕದೇ ಇರುವುದರಿಂದ ತಮ್ಮ ಆಕ್ರೋಶವನ್ನು ಹೊರಹಾಕಿದರು. ಇಂದು ಕೂಡ ಹೋರಾಟ ಮುಂದುವರೆದಿದೆ.
ಪ್ರತಿಭಟನೆ ನಡೆಸುತ್ತಿರುವ ರೈತರು ನಿನ್ನೆ ಹೆದ್ದಾರಿ ಪಕ್ಕದಲ್ಲಿ ಟೆಂಟ್ ಹಾಕಿದ್ದರು. ಆ ಟೆಂಟ್ನ್ನು ಇಂದು ಹೆದ್ದಾರಿಗೆ ಶಿಫ್ಟ್ ಮಾಡಿದ್ದಾರೆ. ರೈತರ ಈ ನಿರ್ಧಾರಕ್ಕೆ ಪೊಲೀಸರ ಆಕ್ಷೇಪಿಸಿದ್ದು ಹೆದ್ದಾರಿ ಮೇಲೆ ಟೆಂಟ್ ಹಾಕುವಂತಿಲ್ಲ ಎಂದು ಎಸ್ಪಿ ಗುಂಜನ್ ಆರ್ಯ ಎಚ್ಚರಿಕೆ ನೀಡಿದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಇತ್ತ, ಬಿಸಿಲು ಹೆಚ್ಚಾಗಿದ್ದಕ್ಕೆ ಟೆಂಟ್ ಶಿಫ್ಟ್ ಮಾಡಿದ್ದೇವೆ ಎಂದು ರೈತರು ಸ್ಪಷ್ಟನೆ ನೀಡಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು:
೧. ಪ್ರತಿ ಟನ್ ಕಬ್ಬಿಗೆ ಕನಿಷ್ಠ ೫,೫೦೦ ರೂ. ದರ ನಿಗದಿಪಡಿಸಬೇಕು.
೨. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಏರಿಕೆ ಮಾಡಬೇಕು.
೩. ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಖರೀದಿಸಬೇಕು.
೪. ಸ್ವಾಮಿನಾಥನ್ ಆಯೋಗದ ವರದಿ ಮತ್ತು ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.

























