
ಬೆಂಗಳೂರು.ಅ.೧೪- ರಾಜಕೀಯದಲ್ಲಿ ಕೀಳು ಮಟ್ಟದ ಆರೋಪ-ಪ್ರತ್ಯಾರೋಪಗಳು ನಡೆಯಬಾರದು. ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ತೆರೆ ಎಳೆಯಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ಟಿಂಗ್ ಆಪರೇಷನ್ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ರಾಜಕೀಯ ತೆವಲಿಗಾಗಿ ಇಂತಹ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.ಈ ವಿಚಾರವಾಗಿ ತನಿಖೆ ನಡೆಯಬೇಕೋ ಬೇಡವೋ ಎಂಬುದನ್ನು ತಾವು ಹೇಳುವುದಿಲ್ಲ. ಆದರೆ, ಈ ರೀತಿಯ ಕೆಸರೆರಚಾಟ ಸರಿಯಲ್ಲ ಎಂದು ತಿಳಿಸಿದರು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್,ಅವರಿಬ್ಬರ ನಡುವೆ ಹಳೆಯ ಸ್ನೇಹ ಇರಬಹುದು. ಹಳೆಯ ಸ್ನೇಹಿತರ ಬಗ್ಗೆ ಕಾಳಜಿ ಇರುವ ಸಾಧ್ಯತೆಯೂ ಇದೆ ಎಂದು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿಚಾರವಾಗಿ ಮಾತನಾಡಿದ ಅವರು, ಫಾರಂ ೬ ಕುರಿತು ಚುನಾವಣಾ ಆಯೋಗವೇ ಸಂಪೂರ್ಣವಾಗಿ ನಿರ್ಧಾರ ಕೈಗೊಂಡಿದ್ದರೆ ತಮ್ಮ ಆಕ್ಷೇಪಣೆ ಇರುತ್ತಿರಲಿಲ್ಲ ಎಂದರು.
ಆದರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಾಂಗಿಯಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂಬುದು ತಮ್ಮ ಆಕ್ಷೇಪವಾಗಿದೆ. ಇದು ಸಂವಿಧಾನ ವಿರೋಧಿ ನಡೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಿಂದ ಹಲವು ಸಚಿವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ವಿಜಯೇಂದ್ರ ಬಹಳ ಆತುರದಲ್ಲಿದ್ದಾರೆ ಎಂದು ಟೀಕಿಸಿದರು.
ತಿರುಕನ ಕನಸು ಎಂಬ ಗಾದೆಯನ್ನು ಉಲ್ಲೇಖಿಸಿದ ಅವರು, ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವ ಕನಸು ಅವರಿಗೆ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಿಂದಕ್ಕೆ ಎಳೆದರು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ರಾಹುಲ್ ಗಾಂಧಿಗೆ ಝಡ್ ಪ್ಲಸ್ ಭದ್ರತೆ ಇದೆ. ಅವರ ಕುಟುಂಬದ ಇಬ್ಬರು ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಭದ್ರತಾ ಪ್ರೋಟೋಕಾಲ್ಗಳು ಇರುತ್ತವೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಯಾರನ್ನೂ ಅಪಮಾನ ಮಾಡುವವರಲ್ಲ. ಭದ್ರತಾ ಸಿಬ್ಬಂದಿ ಅವರನ್ನು ಹಿಂದಕ್ಕೆ ಕಳುಹಿಸಿರಬಹುದು ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.

























