
ಬಿಡದಿ ಟೌನ್‌ಶಿಪ್ ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಭಾಗಿ
ಬೆಂಗಳೂರು.ಆ.೧೦-ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರೈತರ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇವೆ, ಬೇಕಾದರೆ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗುಡುಗಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಎರಡನೇ ದಿನದ ಜೆಡಿಎಸ್ ಪಾದಯಾತ್ರೆಗೆ ಬಿಡದಿಯ ಬಿಜಿಎಸ್ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಬಿಡದಿ ಜನರ ಜೀವನೋಪಾಯವೇ ವ್ಯವಸಾಯ.ಹೀಗಾಗಿ ಟೌನ್‌ಶಿಪ್ ಗೆ ಭೂಮಿಯನ್ನು ಮಾತ್ರ ಬಿಡುವುದಿಲ್ಲ.ರೈತರ ಪರ ಹೋರಾಟವನ್ನು ಮುಂದುವರಿಸುತ್ತೇವೆ.ಬೇಕಾದರೇ ನಾನು ಜೈಲಿಗೆ ಹೋಗುವುದಕ್ಕೂ ಸಿದ್ಧ.ನನಗೆ ೯೩ ವರ್ಷ ಆಗಿರಬಹುದು. ಆದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನನ್ನ ಬುದ್ಧಿಗೆ ವಯಸ್ಸಾಗಿಲ್ಲ, ಶರೀರಕ್ಕೆ ಮಾತ್ರ ವಯಸ್ಸಾಗಿದೆ ಎಂದು ಘೋಷಿಸಿದರು.
ಬಿಡಿಎ ವ್ಯಾಪ್ತಿಯಲ್ಲಿ ಸುಮಾರು ೨೦ ಸಾವಿರ ಸೈಟ್‌ಗಳು ಖಾಲಿ ಇವೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು,ಇದನ್ನು ನಾನು ಹೇಳಿದ್ದಲ್ಲ, ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರೇ, ಬಿಡದಿ ಭಾಗದ ಜನರು ಟೌನ್‌ಶಿಪ್ ಬೇಕೆಂದು ರೈತರು ಅರ್ಜಿ ಸಲ್ಲಿಸಿದ್ದಾರೆಯೇ?,ಎರಡು ವರ್ಷ ರಾಜ್ಯವನ್ನು ಆಳಿದರೆ ನಮಗೆ ಹೊಟ್ಟೆಕಿಚ್ಚು ಎಂದು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುವ ನೀವು ರೈತರ ಹೊಟ್ಟೆಯ ಮೇಲೆ ಹೊಡೆದು ಯಾವ ಪುರುಷಾರ್ಥ ಸಾಧಿಸುತ್ತೀರಿ? ದೆಹಲಿಗೆ ತೆರಳುವ ಮೊದಲು ಮೂರು ಕೋಟಿ ಕೊಡುತ್ತೇವೆ ಎಂದು ಹೇಳುತ್ತೀರಿ. ಕನಕಪುರದಲ್ಲಿ ನೀವು ತೆಗೆದುಕೊಂಡಿರುವ ಜಾಗವನ್ನು ಯಾವ ಯಾವ ಯೋಜನೆಗಳಿಗೆ ಬಳಸುತ್ತೀರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ.ನಂತರ ಬಿಡದಿ ಟೌನ್ ಶಿಫ್ ತೀರ್ಮಾನ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಮುಖ್ಯಮಂತ್ರಿ ಆಗಲು ನೀವು ದೆಹಲಿಯಲ್ಲಿ ಯಾರಿಗೆ ಏನೇನು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿ ಬಂದಿದ್ದೀರೋ ಗೊತ್ತಿಲ್ಲ. ಕೈಮುಗಿದು ಪ್ರಾರ್ಥನೆ ಮಾಡುತ್ತೇವೆ. ರೈತರು ತಾವಾಗಿಯೇ ಕೊಟ್ಟರೆ ಜಾಗ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತೀರಾ? ಆದರೆ ಅಲ್ಲಿರುವವರು ಯಾರು ಇಲ್ಲಿ ಸೇರಿರುವ ಜನರನ್ನು ಅವರೇ ಕರೆದು ಜಾಗ ಕೊಡುತ್ತೇವೆ ಎಂದು ಹೇಳಿದ್ದಾರೆಯೇ? ನಾವು ಯಾವುದೇ ಕಾರಣಕ್ಕೂ ಜಾಗ ಕೊಡುವುದಿಲ್ಲ ಎಂದು ದೇವೇಗೌಡರು ಹೇಳಿದರು.
೧೯೯೪ರಲ್ಲಿ ರಾಮನಗರದಿಂದ ನಾನು ವಿಧಾನಸಭೆಗೆ ಆಯ್ಕೆಯಾದೆ. ರಾಮನಗರದ ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗುವ ಅವಕಾಶ ದೊರೆಯಿತು. ಹೀಗಾಗಿ ಹಳೆಯ ವಿಚಾರಗಳನ್ನು ನೆನಪಿಸಿಕೊಳ್ಳಬೇಕಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರ್ ಬೇರೆ ಒಕ್ಕಲಿಗರನ್ನು ಸಹಿಸುವುದಿಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ಯಾರೇ ಮುಖ್ಯಮಂತ್ರಿಯಾಗಿದ್ದರೂ ಒಳ್ಳೆಯ ಕೆಲಸ ಮಾಡಲಿ. ಬೇರೆ ಒಕ್ಕಲಿಗರನ್ನು ಸಹಿಸುವುದಿಲ್ಲ ಎಂಬ ಆರೋಪಕ್ಕೆ ಇದೇ ನನ್ನ ತಿರುಗೇಟು ಎಂದು ದೇವೇಗೌಡರು ಹೇಳಿದರು.
ಆಗಸ್ಟ್ ೧೯ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೆ ಆಗಮಿಸುವಂತೆ ಕರೆ ನೀಡಿದ ದೇವೇಗೌಡರು,ತಾವು ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

































