Home ಮುಖಪುಟ ಸುದ್ದಿ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು

ಬೆಂಗಳೂರು.ಆ.೧೦: ಬಿ.ನಾಗೇಂದ್ರ ಕಳಂಕಿತ ಸಚಿವರಾಗಿದ್ದು,ವಾಲ್ಮೀಕಿ ನಿಗಮದಲ್ಲಿ ಬಡವರ ಹಣ ತಿಂದವರು. ಇಂತಹವರು ಸಚಿವ ಸಂಪುಟದಲ್ಲಿ ಇರಬಾರದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾಗೇಂದ್ರ ಕೋರ್ಟ್ ಆದೇಶವನ್ನು ಧಿಕ್ಕರಿಸಿ ದೆಹಲಿಗೆ ಹೋಗಿ ಬಂದಿದ್ದಾರೆ.ಬೆದರಿಕೆ ಹಾಕಿ ಸಚಿವ ಸ್ಥಾನ ಪಡೆದಿದ್ದಾರೆ. ಅವರ ವಿಚಾರದಲ್ಲಿ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಪ್ರಶ್ನಿಸಿದರು.


ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಹೋರಾಟ ಮುಂದುವರಿಸಲಿದೆ.ಸದನದ ಒಳಗೂ ಹೊರಗೂ ಹೋರಾಟ ನಡೆಸುತ್ತೇವೆ.ಈ ವಿಚಾರದಲ್ಲಿ ಜೆಡಿಎಸ್ ಜೊತೆಗೂಡಿ ಸದನದಲ್ಲಿ ಜಂಟಿ ಹೋರಾಟ ಮಾಡುತ್ತೇವೆ.ಅಲ್ಲದೆ, ನಾಗೇಂದ್ರ ವಿಚಾರದ ಜೊತೆಗೆ ಕೆಪಿಎಸ್‌ಸಿ ಮತ್ತು ಬಿಡದಿ ವಿಚಾರದಲ್ಲೂ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.


ಇನ್ನೂ ಖಾತೆ ಹಂಚಿಕೆ ಮಾಡದಿರುವುದು ಕಾಂಗ್ರೆಸ್ ಗೆ ದೊಡ್ಡ ಸಮಸ್ಯೆಯಾಗಿದ್ದು,ಖಾತೆ ಹಂಚಿಕೆ ವಿಚಾರದ ಕ್ಯಾತೆ ಇನ್ನೂ ಒಂದೂವರೆ ವರ್ಷ ನಡೆಯಲಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದರು.


ಮೊದಲ ಮೂರು ವರ್ಷ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದರಲ್ಲೇ ಕಳೆದಿದ್ದಾರೆ.ಇದು ಭ್ರಷ್ಟ ಸರ್ಕಾರವಾಗಿದ್ದು,ಸದನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು.