Home ಮುಖಪುಟ ಸುದ್ದಿ ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ:ಅವಧಿ ಮೀರಿದ ಮಾಂಸ, ಕಳಪೆ ಆಹಾರ ಪತ್ತೆ

ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ:ಅವಧಿ ಮೀರಿದ ಮಾಂಸ, ಕಳಪೆ ಆಹಾರ ಪತ್ತೆ

ಬೆಂಗಳೂರು, ಆ. ೧೦- ಐಷಾರಾಮಿ ಹೋಟೆಲ್‌ಗಳ ಹೊರಗಡೆ ತಳುಕು-ಬಳುಕು… ಆದರೆ ಕಿಚನ್‌ಗೆ ಹೋದ್ರೆ ಮಾತ್ರ ಹುಳುಕು! ಗ್ರಾಹಕರಿಗೆ ದುಬಾರಿ ಊಟ ಬಡಿಸುವ ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆಯಲ್ಲಿ ಅವಧಿ ಮೀರಿದ ಮಾಂಸ, ಮೀನು, ಹಾಲು-ಮೊಸರು ಹಾಗೂ ಕಳಪೆ ಆಹಾರ ಪದಾರ್ಥಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.


ವೀಕೆಂಡ್ ಹಿನ್ನೆಲೆ ಜನಜಂಗುಳಿ ಹೆಚ್ಚಿರುವ ಸಂದರ್ಭದಲ್ಲೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ನಗರದ ಪ್ರತಿಷ್ಠಿತ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ಮೆಗಾ ದಾಳಿ ನಡೆಸಿದ್ದಾರೆ. ಯುಬಿ ಸಿಟಿ, ಬ್ರಿಗೇಡ್ ರೋಡ್, ಎಂಜಿ ರೋಡ್ ಹಾಗೂ ಇಂದಿರಾನಗರ ಸೇರಿದಂತೆ ಹಲವೆಡೆ ಏಕಕಾಲಕ್ಕೆ ತಪಾಸಣೆ ನಡೆದಿದೆ.


ಆಹಾರ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ೧೦ಕ್ಕೂ ಹೆಚ್ಚು ಪಬ್ ಹಾಗೂ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದೆ. ಆಹಾರ ತಯಾರಿಸುವ ವಿಧಾನ, ಅಡುಗೆಮನೆಯ ಶುಚಿತ್ವ, ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹಣೆ ಹಾಗೂ ಎಕ್ಸ್‌ಪೈರಿ ದಿನಾಂಕಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.


ಅವಧಿ ಮೀರಿದ ಮಾಂಸ, ಮೀನು ಪತ್ತೆ


ದಾಳಿ ವೇಳೆ ಕೆಲವು ಹೋಟೆಲ್‌ಗಳಲ್ಲಿ ಚಿಕನ್, ಮಟನ್ ಮತ್ತು ಮೀನುಗಳನ್ನು ನಿಯಮಾನುಸಾರ ಫ್ರೀಜ್ ಮಾಡದೇ ಸಂಗ್ರಹಿಸಿರುವುದು ಪತ್ತೆಯಾಗಿದೆ.
-೧೮ ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಿಕನ್ ಮತ್ತು ಮಟನ್ ಅನ್ನು ಗರಿಷ್ಠ ಒಂದು ವರ್ಷದವರೆಗೆ ಸಂಗ್ರಹಿಸಬಹುದು. ಆದರೆ ಮೀನುಗಳ ಸಂಗ್ರಹಣೆಗೆ ಸಾಮಾನ್ಯವಾಗಿ ಕಡಿಮೆ ಅವಧಿಯ ಮಿತಿ ಇದೆ. ಆದರೂ ಕೆಲ ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ದೀರ್ಘಕಾಲದಿಂದ ಮಾಂಸ ಹಾಗೂ ಮೀನು ಸಂಗ್ರಹಿಸಿರುವುದು ಪತ್ತೆಯಾಗಿದೆ.
ಕೆಲವೆಡೆ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲಿನ ದಿನಾಂಕವನ್ನೇ ಬದಲಿಸಿ ಹೊಸ ಸ್ಟಿಕ್ಕರ್ ಅಂಟಿಸಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ.
ರಾಯಲ್ ಚೈನ್‌ನಲ್ಲಿ ಸುಮಾರು ೫೦ ಕೆಜಿ ನಾನ್‌ವೆಜ್ ಪತ್ತೆಯಾಗಿದ್ದರೆ, ಟಸ್ಕಾನೊ ಸೇರಿದಂತೆ ಕೆಲವು ಕಡೆ ಅವಧಿ ಮೀರಿದ ತರಕಾರಿ ಹಾಗೂ ಡ್ರೈಫ್ರೂಟ್ಸ್ ಪತ್ತೆಯಾಗಿವೆ.


ಸ್ಕೈ ಲಾಂಜ್‌ನಲ್ಲಿ ೪೫ ಕೆಜಿ ಮಾಂಸ ವಶ


ಯುಬಿ ಸಿಟಿಯ ೧೬ನೇ ಮಹಡಿಯಲ್ಲಿರುವ ಸ್ಕೈ ಲಾಂಜ್‌ನಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹೆಚ್ಚಿನ ಪ್ರಮಾಣದ ಕಳಪೆ ಆಹಾರ ಪದಾರ್ಥಗಳು ಸಿಕ್ಕಿವೆ.
ಕಿಚನ್‌ನಲ್ಲಿ ಶುಚಿತ್ವದ ಕೊರತೆ ಜೊತೆಗೆ ಕೊಳೆತ ಮಾಂಸ, ಅವಧಿ ಮೀರಿದ ಹಾಲು ಮತ್ತು ಮೊಸರು ಪತ್ತೆಯಾಗಿದೆ. ಸುಮಾರು ೧೦ ದಿನಗಳ ಹಿಂದೆಯೇ ಎಕ್ಸ್‌ಪೈರ್ ಆಗಿದ್ದ ಹಾಲು-ಮೊಸರು ಕೂಡ ಪತ್ತೆಯಾಗಿದೆ.


ಸ್ಕೈ ಲಾಂಜ್‌ನಿಂದ ಬರೋಬ್ಬರಿ ೪೫ ಕೆಜಿ ಮಾಂಸ, ೬ ಕೆಜಿ ತರಕಾರಿ ಹಾಗೂ ಬಳಕೆಯಾದ ಅಡುಗೆ ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಕಳಪೆ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಿಚನ್‌ಗೆ ಬೀಗ ಹಾಕಿ, ವಶಪಡಿಸಿಕೊಂಡ ಆಹಾರವನ್ನು ಪ್ರೀಜ್ ಲಾಕ್ ಮಾಡಲು ಸೂಚಿಸಲಾಗಿದೆ.
೧೦-೧೫ ಸ್ಯಾಂಪಲ್ ಸಂಗ್ರಹ


ಕಾರ್ಯಾಚರಣೆಯಲ್ಲಿ ಸುಮಾರು ೧೦ರಿಂದ ೧೫ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಸ್ಯಾಂಪಲ್‌ಗಳನ್ನು ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.


ಅಧಿಕಾರಿಗಳ ಪ್ರಕಾರ, ಈಗಾಗಲೇ ನಗರದಾದ್ಯಂತ ೫೯ ಹೋಟೆಲ್‌ಗಳನ್ನು ತಪಾಸಣೆ ಮಾಡಲಾಗಿದ್ದು, ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು ೩೦ ಮಂದಿಗೆ ನೋಟಿಸ್ ನೀಡಲಾಗಿದೆ.


ಯುಬಿ ಸಿಟಿ ವ್ಯಾಪ್ತಿಯಲ್ಲೇ ನಿನ್ನೆ ರಾತ್ರಿ ೧೦ ಪಬ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ನಾಲ್ಕು ಪಬ್-ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ.


ಟಸ್ಕಾನೊದಲ್ಲಿ ರಮ್ ಕೂಡ ವಶ


ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಟಸ್ಕಾನೊದಲ್ಲಿ ರಮ್‌ನ ಮೂರು ಬಾಟಲಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ.

ಹೋಟೆಲ್‌ಗಳಿಗೆ ಭಾರಿ ದಂಡದ ಎಚ್ಚರಿಕೆ:


ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸುವ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ೫ ಲಕ್ಷದವರೆಗೆ ದಂಡ ವಿಧಿಸುವ ಅಧಿಕಾರ ಇಲಾಖೆಗೆ ಇದೆ ಎಂದು ಅವರು ತಿಳಿಸಿದ್ದಾರೆ. ಹೋಟೆಲ್ ಮಾಲೀಕರಿಗೆ ಆಹಾರ ಸಂಗ್ರಹಣೆ ಹಾಗೂ ಸುರಕ್ಷತಾ ನಿಯಮಗಳ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು ಕಂಡುಬಂದಿದ್ದು, ಶೀಘ್ರದಲ್ಲೇ ಅಡ್ವೈಸರಿ ಹೊರಡಿಸಲಾಗುವುದು ಎಂದಿದ್ದಾರೆ.


ಇನ್ನು ಆನ್‌ಲೈನ್ ಮೂಲಕ ಸೆಂಟ್ರಲ್ ಕಿಚನ್‌ಗಳ ಪರಿಶೀಲನೆ ನಡೆಸಲು ಕೂಡ ಇಲಾಖೆ ಮುಂದಾಗಿದೆ.

ದಾಳಿ ನಡೆಸದಂತೆ ಒತ್ತಡ ಬಂದಿದೆಯಾ?


ಆಹಾರ ಇಲಾಖೆಯ ದಾಳಿ ತಡೆಯಲು ಯಾರಾದರೂ ಒತ್ತಡ ಹೇರಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಆಯುಕ್ತ ಶ್ರೀನಿವಾಸ್, ತಮಗೆ ಯಾವುದೇ ಒತ್ತಡ ಬಂದಿಲ್ಲ ಮತ್ತು ಯಾರೂ ಫೋನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ವೀಕೆಂಡ್‌ನಲ್ಲಿ ಪಬ್ ಮತ್ತು ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಜನರು ಭೇಟಿ ನೀಡುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.


ಐಷಾರಾಮಿ ಹೋಟೆಲ್‌ಗಳಲ್ಲಿ ಊಟ ಮಾಡುವ ಮುನ್ನ ಗ್ರಾಹಕರೇ ಎಚ್ಚರ!
ಹೊರಗಡೆ ಐಷಾರಾಮಿ ಅಲಂಕಾರ… ಒಳಗೆ ಮಾತ್ರ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹ!
ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಹೋಟೆಲ್‌ಗಳ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಮೆಗಾ ಆಪರೇಷನ್ ಮುಂದುವರಿಸಿದೆ.