Home ಮುಖಪುಟ ಸುದ್ದಿ ೫೫.೮೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

೫೫.೮೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

೩೯ ಮಂದಿ ಸೆರೆ

ಬೆಂಗಳೂರು,ಆ.೧೦-ಮಿಷನ್ ರೈಸ್ ಹಾಗೂ ಮಾದಕ ವಸ್ತುಗಳ ವಿರುದ್ಧದ ಅಭಿಯಾನ ಬೇಡ ಬ್ರೋ ಕಾರ್ಯಕ್ರಮದ ಭಾಗವಾಗಿ ನಗರದ ವಿವಿಧೆಡೆ ಭರ್ಜರಿ ಕಾರ್ಯಾಚರಣೆ ಕೈಗೊಂಡಿರುವ ನಗರ ಪೊಲೀಸರು ೮ ವಿದೇಶಿಯರು, ೨೧ ಹೊರ ರಾಜ್ಯದ, ೧೦ ಸ್ಥಳೀಯರು ಸೇರಿ ೩೯ ಮಂದಿ ಡ್ರಗ್ಸ್ ಫೆಡ್ಲರ್‌ಗಳನ್ನು ಬಂಧಿಸಿ ೫೫.೮೦ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.


ಅಮೃತಹಳ್ಳಿ, ಗಿರಿನಗರ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ಕೆಐಎ, ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ,ಮಹಾಲಕ್ಷ್ಮೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ೫೫.೮೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಬಂಧಿತ ಆರೋಪಿಗಳಿಂದ ೧೭ ಲಕ್ಷ ನಗದು ಸೇರಿ ೫೫.೮೦ ಕೋಟಿ ಮೌಲ್ಯದ ೨೧ ಕೆಜಿ ೬೪೧ ಗ್ರಾಂ ಎಂಡಿಎಂಎ, ೭೩೮ ಗ್ರಾಂ ಕೋಕೇನ್, ೪ ಕೆಜಿ ೪೯೩ ಗ್ರಾಂ ಹೈಡ್ರೋಗಾಂಜಾ, ೧೮೪ ಕೆಜಿ ೬೨೫ ಗ್ರಾಂ ಗಾಂಜಾ, ೧ ಕೆಜಿ ೬೫ ಗ್ರಾಂ ಅಫೀಮು, ೨೫ ಗ್ರಾಂ ಮಾರ್ಫಿನ್, ೨೨ ಮೊಬೈಲ್ ಪೋನ್‌ಗಳು ಹಾಗೂ ೫ ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.


ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ವಿದೇಶ, ಹೊರ ರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.


ಬಂಧಿತ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳು ಪ್ರಗತಿಯಲ್ಲಿರುತ್ತವೆ.ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೩೯ ಆರೋಪಿಗಳನ್ನು ವಿವಿಧ ದಿನಾಂಕಗಳಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ೩೯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿದರು.


೧೦.೩೬ ಕೋಟಿ ಡ್ರಗ್ಸ್ ಜಪ್ತಿ:


ಗಿರಿನಗರ ಪೊಲೀಸರು ರಿಪಬ್ಲಿಕ್ ಆಫ್ ಐವರಿ ದೇಶದ ಪ್ರಜೆ ಡಿಂಬೆ ಜುಮಾ ಫ್ರಾನ್ಸಿಸ್ ನನ್ನು ಬಂಧಿಸಿ ೧೦.೩೬ ಕೋಟಿ ಮೌಲ್ಯದ ೪ ಕೆಜಿ ೩೭೮ ಗ್ರಾಂ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.


ಆರೋಪಿಯು ದೆಹಲಿಯಲ್ಲಿ ಆಫ್ರಿಕಾದ ಡ್ರಗ್ ಫೆಡ್ಲರ್ ಗಳ ಜೊತೆ ಸಂಪರ್ಕ ಸಾಧಿಸಿ ಕಡಿಮೆ ಬೆಲೆಗೆ ಡ್ರಗ್ಸ್ ಕಳ್ಳ ಸಾಗಾಣೆ ಮಾಡಿಕೊಂಡು ಬಂದು ಯಲಹಂಕದ ಶಿವಕೋಟೆಯ ಬಾಡಿಗೆ ಮನೆಯಲ್ಲಿದ್ದು ಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದರು.


ಅಮೃತಹಳ್ಳಿ ಪೊಲೀಸರು ೨೮.೮೮ ಕೋಟಿ ಮೌಲ್ಯದ ೧೪ ಕೆಜಿ ೪೩೬ ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.


ಕೊಕೇನ್ ಜಪ್ತಿ:


ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಯು ಮೂವರು ವಿದೇಶಿ ಸೇರಿ ನಾಲ್ವರು ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ಮೂರು ಪ್ರಕರಣಗಳ ಸಂಬಂಧ ೮.೮೮ಕೋಟಿ ಮೌಲ್ಯದ ೭೩೮ ಗ್ರಾಂ ಕೋಕೇನ್,೩೩೬ ಗ್ರಾಂ ಎಂಡಿಎಂಎ,೮೨ ಕೆಜಿ ೩೦೫ ಗಾಂಜಾ,
೨ ದ್ವಿಚಕ್ರ ವಾಹನ,೩ ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡರೆ,ಕೆಐಎ ಪೊಲೀಸರು ೩ ಪ್ರಕರಣಗಳ ಸಂಬಂಧ ೩ ಕೋಟಿ ಮೌಲ್ಯದ ೪ ಕೆಜಿ ೨೭೮ ಗ್ರಾಂ ಹೈಡ್ರೋಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಹೇಳಿದರು.


೪೧ ಕೆಜಿ ಗಾಂಜಾ ಜಪ್ತಿ:


ಯಶವಂತಪುರ ಪೊಲೀಸರು ೨ ಪ್ರಕರಣಗಳ ಸಂಬಂಧ ೧.೭೧ ಕೋಟಿ ಮೌಲ್ಯದ ೬೫೦ ಗ್ರಾಂ ಎಂಡಿಎಂಎ.೪೧ ಕೆಜಿ ೪೪೬ ಗ್ರಾಂ ಗಾಂಜಾ,೧-ದ್ವಿಚಕ್ರ ವಾಹನ ೩-ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.


ಯಲಹಂಕ ಪೊಲೀಸರು ೧.೫೯ ಕೋಟಿ ಮೌಲ್ಯದ ೭೯೪ ಗ್ರಾಂ ಎಂಡಿಎಂಎ, ೨ ಮೊಬೈಲ್ ಗಳನ್ನು ಜಪ್ತಿ ಮಾಡಿದರೆ,


ಹೆಬ್ಬಾಳ ಪೊಲೀಸರು ೧೭ ಲಕ್ಷ ನಗದು ಸೇರಿ


೧೯.೨೦ ಲಕ್ಷ ಮೌಲ್ಯದ ೯೬ ಗ್ರಾಂ ಎಂಡಿಎಂಎ,೨-ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.


ನಂದಿನಿಲೇಔಟ್ ಪೊಲೀಸರು ೩೦ ಲಕ್ಷ ಮೌಲ್ಯದ ೧೫೦ ಗ್ರಾಂ ಎಂಡಿಎಂಎ,೮ ಮೊಬೈಲ್ ೧-ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದರೆ,ಕಾಡುಗೋಡಿ ಪೊಲೀಸರು ೧೫.೮೦ ಲಕ್ಷ ಮೌಲ್ಯದ ೧೫ ಕೆಜಿ ೮೦೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಹೈಡ್ರೋಗಾಂಜಾ ಜಪ್ತಿ:


ಮಲ್ಲೇಶ್ವರಂ ಪೊಲೀಸರು ೧೫.೦೫ ಲಕ್ಷ ಮೌಲ್ಯದ ೨೧೫ ಗ್ರಾಂ ಹೈಡ್ರೋಗಾಂಜಾ ೧ ಮೊಬೈಲ್ ವಶಪಡಿಸಿಕೊಂಡರೆ, ಗೋವಿಂದಪುರ ಪೊಲೀಸರು೧೧.೨೭ ಲಕ್ಷ ಮೌಲ್ಯದ ೧೧ ಕೆಜಿ ೨೭೦ ಗ್ರಾಂ ಗಾಂಜಾ ಜಪ್ತಿ ಮಾಡಿದರೆ,ಬಾಗಲೂರು ಪೊಲೀಸರು ೨ ಪ್ರಕರಣಗಳ ಸಂಬಂಧ ೨೫ ಗ್ರಾಂ ಮಾರ್ಪಿನ್,೫ ಕೆಜಿ ೭೮೦ ಗ್ರಾಂ ಗಾಂಜಾ
ವಶಪಡಿಸಿಕೊಂಡಿದ್ದಾರೆ.


ಮಹದೇವಪುರ ಪೊಲೀಸರು ೧೦.೫೮ ಲಕ್ಷ ಮೌಲ್ಯದ ೧೦ ಕೆಜಿ ೫೭೯ ಗ್ರಾಂ ಗಾಂಜಾ ಮಹಾಲಕ್ಷ್ಮೀ ಲೇಔಟ್ ಪೊಲೀಸರು ೧೦.೬೫ ಲಕ್ಷ ಮೌಲ್ಯದ ೧ ಕೆಜಿ ೬೫ ಗ್ರಾಂ ಆಫೀಮು ೧-ದ್ವಿಚಕ್ರ ವಾಹನ, ೨-ಮೊಬೈಲ್ ಗಳನ್ನು, ಬೇಗೂರು ಪೊಲೀಸರು ೧೦ ಲಕ್ಷ ಮೌಲ್ಯದ
೧೦ ಕೆಜಿ ಗಾಜಾ, ಕೊತ್ತನೂರು ಪೊಲೀಸರು ೭.೪೪ ಲಕ್ಷ ಮೌಲ್ಯದ ೭ ಕೆಜಿ ೪೪೫ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಗಳನ್ನು ಡಿಸಿಪಿಗಳಾದ ಮಿಥುನ್ ಕುಮಾರ್.ಜಿ.ಕೆ, ಡಾ:ಕೆ.ವಂಶಿಕೃಷ್ಣ, ರಾಜಾ ಇಮಾಮ್ ಕಾಸೀಂ, ಬಿ.ಎಸ್.ನೇಮಗೌಡ,ಸೈದುಲು ಅಡಾವತ್, ಡಾ:ವಿಕ್ರಮ್ ಅಮಟೆ,ನಾರಾಯಣ.ಎಂ, ಅವರ ಮಾರ್ಗದರ್ಶನದಲ್ಲಿ ಎಸಿಪಿ ಇನ್ಸ್‌ಪೆಕ್ಟರ್ ಗಳು ಮತ್ತವರ ತಂಡವು ಕೈಗೊಂಡು ಪ್ರಕರಣಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.