Home ಮುಖಪುಟ ಸುದ್ದಿ ಪ್ರಶ್ನೆಪತ್ರಿಕೆ ಸೋರಿಕೆ: ತ್ವರಿತ ನ್ಯಾಯಾಲಯ ಸ್ಥಾಪಿಸಿ ಅಧಿಸೂಚನೆ

ಪ್ರಶ್ನೆಪತ್ರಿಕೆ ಸೋರಿಕೆ: ತ್ವರಿತ ನ್ಯಾಯಾಲಯ ಸ್ಥಾಪಿಸಿ ಅಧಿಸೂಚನೆ

ಹೊಸದೆಹಲಿ,ಜು.೨೪- ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಸ್ಪರ್ಧಾತ್ಮಕ ಮತ್ತು ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ದೆಹಲಿ ಹೈಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಸಂಕೀರ್ಣದಲ್ಲಿ ಪರೀಕ್ಷಾ ಅಕ್ರಮ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗಾಗಿಯೇ ಪ್ರತ್ಯೇಕ ‘ವಿಶೇಷ ತ್ವರಿತ ನ್ಯಾಯಾಲಯ’ವನ್ನು ಸ್ಥಾಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ಅನು ಗ್ರೋವರ್ ಬಾಲಿಗಾ ಅವರನ್ನು ನೇಮಕ ಮಾಡಲಾಗಿದ್ದು, ಈ ನ್ಯಾಯಾಲಯವು ಇನ್ಮುಂದೆ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಆದ್ಯತೆಯ ಮೇಲೆ ವಿಚಾರಣೆ ನಡೆಸಲಿದೆ.

ಪರೀಕ್ಷಾ ಅಕ್ರಮ ಎಸಗುವವರ ವಿರುದ್ಧ ಕಠಿಣ ಹಾಗೂ ತ್ವರಿತ ಕ್ರಮ ಕೈಗೊಳ್ಳಲು ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಕೆಲವೇ ಗಂಟೆಗಳಲ್ಲಿ ದೆಹಲಿ ಹೈಕೋರ್ಟ್ ಈ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ.

“ನಮ್ಮ ಯುವಜನತೆಯ ಭವಿಷ್ಯ ಮತ್ತು ಅವರ ಹಿತಾಸಕ್ತಿಗಿಂತ ಬೇರೇನೂ ಮುಖ್ಯವಲ್ಲ. ಪರೀಕ್ಷಾ ಅಕ್ರಮ ಎಸಗಿದವರಿಗೆ ತಕ್ಷಣವೇ ಕಠಿಣ ಶಿಕ್ಷೆಯಾಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ,” ಎಂದು ಪ್ರಧಾನಿ ಮೋದಿ ’ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತಿಳಿಸಿದ್ದರು.

ಪ್ರಧಾನಿ ಘೋಷಣೆ ಬಳಿಕ ಅಸ್ತಿತ್ವಕ್ಕೆ ಬಂದ ಮೊದಲ ವಿಶೇಷ ನ್ಯಾಯಾಲಯ ಇದಾಗಿದೆ. ದೆಹಲಿ ಮಾದರಿಯಲ್ಲೇ ಮುಂಬೈ, ಕೊಲ್ಕತ್ತಾ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳ ವ್ಯಾಪ್ತಿಯಲ್ಲೂ ಶೀಘ್ರದಲ್ಲೇ ಇಂತಹ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಕಾರ್ಯಾರಂಭ ಮಾಡಲಿವೆ. ೨೦೨೪ರಲ್ಲಿ ಜಾರಿಗೆ ತರಲಾದ ’ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ’ಯಡಿ ಸಿಬಿಐ ಹಾಗೂ ಕೇಂದ್ರ ಸಂಸ್ಥೆಗಳು ದಾಖಲಿಸುವ ಸಂಘಟಿತ ಚೀಟಿಂಗ್, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಪ್ರಸ್ತುತ ಈ ಕಾಯ್ದೆಯಡಿ ೪ ಪ್ರಕರಣಗಳು ದಾಖಲಾಗಿದ್ದು, ಇವುಗಳ ವಿಚಾರಣೆ ತಕ್ಷಣವೇ ಕಾಯ್ದಿರಿಸಿದ ನ್ಯಾಯಾಲಯದಲ್ಲಿ ಆರಂಭವಾಗಲಿದೆ.

ಪರೀಕ್ಷಾ ಅಕ್ರಮದ ಆರೋಪದ ಬೆನ್ನಲ್ಲೇ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಮುಗಿಲುಮುಟ್ಟಿತ್ತು. ಪ್ರಸ್ತುತ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಯಿಂದಾಗಿ ಅಕ್ರಮ ಎಸಗುವ ಜಾಲಗಳಿಗೆ ಸಿಂಹಸ್ವಪ್ನವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.