
ಯಾದಗಿರಿ,ಜು.24-ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಜವಾಹಾರ್ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ, ಕಾಲೇಜು ಆವರಣದಿಂದ ಹೊಸ ಬಸ್ ನಿಲ್ದಾಣದವರೆಗೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕೆಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‍ಓ) ಯಾದಗಿರಿ ಜಿಲ್ಲಾ ಸಮಿತಿಯ ಮೂಲಕ ಕೆಎಸ್‍ಆರ್‍ಟಿಸಿ ಡಿಪೆÇೀ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಎಐಡಿಎಸ್‍ಓ ಜಿಲ್ಲಾ ಸಮಿತಿಯ ಪರವಾಗಿ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ.ಕೆ. ಹಾಗೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಸಮಸ್ಯೆಯ ತೀವ್ರತೆಯನ್ನು ವಿವರಿಸಲಾಯಿತು.
ಪ್ರತಿದಿನ ಮಧ್ಯಾಹ್ನ 1:30, 2:30 ಹಾಗೂ 3:30ಕ್ಕೆ ಕಾಲೇಜು ತರಗತಿಗಳು ಮುಕ್ತಾಯಗೊಳ್ಳುತ್ತವೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ನೂರಾರು ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಹೊಸ ಬಸ್ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಆದರೆ ಈ ವೇಳೆಯಲ್ಲಿ ಸರಿಯಾದ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜಿನಿಂದ ಹೊಸ ಬಸ್ ನಿಲ್ದಾಣದವರೆಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಅಥವಾ ಹೆಚ್ಚಿನ ಬಾಡಿಗೆ ನೀಡಿ ಆಟೋಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಇದರಿಂದಾಗಿ ಗ್ರಾಮಗಳಿಗೆ ತೆರಳುವ ಕೊನೆಯ ಬಸ್ಸುಗಳನ್ನು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಕಾಲೇಜಿನಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಸೂಕ್ತ ಸಾರಿಗೆ ಇಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಿಡಿಗೇಡಿಗಳಿಂದ ತೊಂದರೆ ಎದುರಾಗುವ ಭೀತಿ ಉಂಟಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆಯು ಅತ್ಯಂತ ಪ್ರಮುಖ ವಿಚಾರವಾಗಿದ್ದು, ಆಡಳಿತ ಮಂಡಳಿ ಇದನ್ನು ತಕ್ಷಣ ಪರಿಗಣಿಸಬೇಕು. ವಿದ್ಯಾರ್ಥಿಗಳ ಸಮಯ, ಹಣ ಉಳಿತಾಯ ಹಾಗೂ ಬಾಲಕಿಯರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿದಿನ ಮಧ್ಯಾಹ್ನ ಖಚಿತವಾಗಿ 1:30, 2:30 ಹಾಗೂ 3:20ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಹೊಸ ಬಸ್ ನಿಲ್ದಾಣಕ್ಕೆ ವಿಶೇಷ/ಸಮರ್ಪಕ ಬಸ್ಸುಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಸಂಸ್ಥೆಗೆ ಮನವಿ ಮಾಡಲಾಯಿತು.































