Home ಮುಖಪುಟ ಸುದ್ದಿ ಹಳೇ ಹುಬ್ಬಳ್ಳಿಯಲ್ಲಿ ಪುಷ್ಕರಣಿ ವಿವಾದ: ಪ್ರತಿಭಟನೆ: ನಿಷೇಧಾಜ್ಞೆ

ಹಳೇ ಹುಬ್ಬಳ್ಳಿಯಲ್ಲಿ ಪುಷ್ಕರಣಿ ವಿವಾದ: ಪ್ರತಿಭಟನೆ: ನಿಷೇಧಾಜ್ಞೆ

ಹುಬ್ಬಳ್ಳಿ, ಆ ೨೨: ಇಲ್ಲಿನ ಹಳೇ-ಹುಬ್ಬಳ್ಳಿಯ ಆಸಾರ ಓಣಿಯಲ್ಲಿನ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಸೇರಿದ ಪುಷ್ಕರಣಿ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮುಂಜಾಗೃತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಇಂದು ಬೆಳಿಗ್ಗೆ ೬ ರಿಂದ ರಾತ್ರಿ ೧೦ರವರೆಗೂ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಂದೋಬಸ್ತ್‌ಗಾಗಿ ೧೫೦೦ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹು-ಧಾ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯ ನಿಯಂತ್ರಣಕ್ಕೆ ಕ್ರಮ ಕೈಕೊಂಡಿದ್ದಾರೆ.

ಇಂದು ಮುಂಜಾನೆಯಿಂದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಶಾಸಕರಾದ ಮಹೇಶ್ ಟೆಂಗಿನಕಾಯಿ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸೇರಿದಂತೆ ಹಲವಾರು ಧುರೀಣರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಸೇರಿದ ಪುಷ್ಕರಣಿ ಮೇಲೆ ನಿರ್ಮಾಣ ಮಾಡಿರುವ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಗೆ ಗಡುವು ನೀಡಿದ್ದರು. ನಂತರ ಮುಂದಿನ ಹೋರಾಟ ಕೈಗೊಳ್ಳಲು ಪುಷ್ಕರಣೆ ಸಂರಕ್ಷಣಾ ಸಮಿತಿಯು ರಸ್ತೆ ತೆರವು ಹಾಗೂ ದೇವಸ್ಥಾನ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಗಡುವು ನೀಡಿತ್ತು. ಇದಕ್ಕೆ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಸ್ಪಂದಿಸಿಲ್ಲವೆಂದು ಇಂದು ಬೆಳಿಗ್ಗೆ ಪುಷ್ಕರಣಿ ಚಲೋ ಹೋರಾಟವನ್ನು ಹಮ್ಮಿಕೊಂಡಿದ್ದು, ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಸೇರಿದ ಪುಷ್ಕರಣಿ ಮೇಲೆ ನಿರ್ಮಾಣ ಮಾಡಿರುವ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದವು. ಪುಷ್ಕರಣಿ ಉಳಿಸಿ, ದೇವಸ್ಥಾನ ಬೆಳೆಸಿ ಎಂದು ಘೋಷಣೆಗಳನ್ನು ಕೂಗಲಾಯಿತು. ಸ್ಥಳಕ್ಕೆ ನುಗ್ಗಲು ಪ್ರತಿಭಟನಾನಿರತರು ಯತ್ನಿಸಿದಾಗ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಹೇಶ್, ಟೆಂಗಿನಕಾಯಿ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಖಂಡರಾದ ಜಯತೀರ್ಥ ಕಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.