Home ಮುಖಪುಟ ಸುದ್ದಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ,ಆ೨೦:ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧೆಡೆ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ್ದಾರೆನ್ನಲಾದ ಅತಿಯಾದ ಬಲಪ್ರಯೋಗ ಮತ್ತು ದೌರ್ಜನ್ಯದ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ ಗುರುವಾರ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಿದೆ.

ಸಂಸತ್ತಿನ ಚಲೋ ಮತ್ತು ಸಾರ್ವಜನಿಕ ಪ್ರತಿಭಟನೆಗಳ ವೇಳೆ ಪೊಲೀಸರು ಪೆಲೆಟ್ ಗನ್‌ಗಳು, ಎಲೆಕ್ಟ್ರಿಕ್ ಲಾಠಿಗಳು, ಅಶ್ರುವಾಯು ಹಾಗೂ ಅತಿಯಾದ ಲಾಠಿಚಾರ್ಜ್ ಬಳಸಿರುವ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಐದು ಸದಸ್ಯರ ಉನ್ನತ ಸಮಿತಿಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಈ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ನ್ಯಾಯಮೂರ್ತಿ ರವಿ ಶಂಕರ್ ಝಾ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ. ನ್ಯಾಯಮೂರ್ತಿ ಶಾಲಿಂದರ್ ಕೌರ್: ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ. ಋಷಿ ಕುಮಾರ್ ಶುಕ್ಲಾ: ಸಿಬಿಐ ನಿಕಟಪೂರ್ವ ನಿರ್ದೇಶಕರು. ಡಾ. ಎಲ್.ಆರ್. ಬಿಷ್ಣೋಯ್: ಮೇಘಾಲಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಸಮಿತಿಯ ತನಿಖಾ ವ್ಯಾಪ್ತಿ ಹಾಗೂ ಪ್ರಮುಖ ಅಂಶಗಳು ಶೈಲೇಂದ್ರ ಮಣಿ ತ್ರಿಪಾಠಿ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಎರಡೂ ಕಡೆಯ ದೂರುಗಳನ್ನು ಪರಿಶೀಲಿಸಲು ಸೂಚಿಸಿದೆ.

ವಿದ್ಯಾರ್ಥಿಗಳನ್ನು ಚದುರಿಸಲು ಬಳಸಿದ ಪೆಲೆಟ್ ಗನ್, ಎಲೆಕ್ಟ್ರಿಕ್ ಬ್ಯಾಟನ್, ಲಾಠಿಚಾರ್ಜ್ ಪರಿಸ್ಥಿತಿಗೆ ತಕ್ಕಂತೆ ಇತ್ತೇ ಅಥವಾ ಮಿತಿಗಿಂತ ಹೆಚ್ಚಾಗಿತ್ತೇ ಎಂಬುದನ್ನು ಸಮಿತಿ ಪರಿಶೀಲಿಸಲಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮಹಿಳಾ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಹಲ್ಲೆಯ ಆರೋಪಗಳಿಗೆ ಆದ್ಯತೆ ನೀಡಿ ತನಿಖೆ ನಡೆಸಿ ಮಧ್ಯಂತರ ವರದಿ ನೀಡುವಂತೆ ಆದೇಶಿಸಲಾಗಿದೆ.

ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ಸಮವಸ್ತ್ರ ಮತ್ತು ಹೆಸರಿನ ಪಟ್ಟಿ (ನೇಮ್ ಪ್ಲೇಟ್) ಧರಿಸಿದ್ದರೇ ಹಾಗೂ ಪ್ರತಿಭಟನಾಕಾರರ ಮೇಲೆ ಕಾನೂನುಬಾಹಿರವಾಗಿ ಕಣ್ಗಾವಲು ಇರಿಸಲಾಗಿತ್ತೇ ಎಂಬುದನ್ನೂ ತನಿಖೆಗೊಳಪಡಿಸಲಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ: ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿ ಪೊಲೀಸರ ಮೇಲೆ ನಡೆಸಿದ ಕಲ್ಲು ತೂರಾಟ, ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಕುರಿತು ಸರ್ಕಾರದ ದೂರುಗಳನ್ನೂ ಸಮಿತಿ ವಿಚಾರಣೆ ನಡೆಸಲಿದೆ.

ಸಾಕ್ಷ್ಯ ಸಂರಕ್ಷಣೆಗೆ ಕಟ್ಟುನಿಟ್ಟಿನ ಆದೇಶಪ್ರತಿಭಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು, ಡ್ರೋನ್ ವೀಡಿಯೊಗಳು, ಬಾಡಿ ಕ್ಯಾಮೆರಾ ರೆಕಾರ್ಡಿಂಗ್‌ಗಳು, ವೈರ್‌ಲೆಸ್ ಲಾಗ್‌ಗಳು ಮತ್ತು ಪಿಸಿಆರ್ ಕಾಲ್ ವಿವರಗಳನ್ನು ತಕ್ಷಣವೇ ಸಂರಕ್ಷಿಸಿ ತನಿಖಾ ಸಮಿತಿಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್ ಭದ್ರತಾ ಸಂಸ್ಥೆಗಳಿಗೆ ನಿರ್ದೇಶಿಸಿದೆ.

ಈ ತನಿಖೆಯಿಂದ ತಪ್ಪಿತಸ್ಥ ಅಧಿಕಾರಿಗಳ ಮೇಲಿನ ಇಲಾಖಾ ವಿಚಾರಣೆಗೆ ಯಾವುದೇ ತಡೆಯಿರುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.ಸುಪ್ರೀಂ ಕೋರ್ಟ್ ಸಮಿತಿಗೆ ನಿಯತಕಾಲಿಕವಾಗಿ ವರದಿ ಸಲ್ಲಿಸಲು ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೧೦, ೨೦೨೬ ಕ್ಕೆ ಕಾಯ್ದಿರಿಸಿದೆ.