
ಬೆಂಗಳೂರು,ಆ೨೨- ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ ೫೦ ರಿಂದ ೭೫ ರೂ, ವರೆಗೆ ಹಾಗೂ ಬೆಲ್ಲದ ಬೆಲೆ ಕೆ.ಜಿ.ಗೆ ಸುಮಾರು ೧೦೦ ರೂ. ರವರೆಗೆ ಏರಿಕೆಯಾಗಿದೆ. ಸಾಲು ಸಾಲು ಹಬ್ಬಗಳ ಬೇಡಿಕೆ, ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆ ಮತ್ತು ಮಾರುಕಟ್ಟೆಯಲ್ಲಿ ಕೃತಕ ಅಭಾವವೇ ಈ ಹಠಾತ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಗ್ರಾಹಕರಿಗೆ ಆರ್ಥಿಕ ಹೊರೆಯಾಗಿದೆ.
ಸಕ್ಕರೆ ದರ ಕೆಜಿಗೆ ೫೦-೫೫ ರೂ.ನಿಂದ ೭೦-೭೫ ರೂ.ಗೆ ಏರಿದ್ದು, ದೇಶೀಯ ಉತ್ಪಾದಿತ ಸಕ್ಕರೆ ಬೆಲೆ ಸುಮಾರು ಶೇ ೪೦ರಷ್ಟು ಏರಿಕೆಯಾಗಿದೆ. ಇದೇ ರೀತಿ ಬೆಲ್ಲದ ದರವೂ ಗಗನಕ್ಕೇರಿದ್ದು, ಕ್ವಿಂಟಾಲ್‌ಗೆ ೪,೫೦೦ ರೂ. ಇದ್ದ ಬೆಲೆ ಈಗ ೬,೫೦೦-೭,೦೦೦ ರೂ.ಗೆ ತಲುಪಿದೆ. ಕೆಲವೇ ದಿನಗಳಲ್ಲಿ ಬೆಲ್ಲದ ಬೆಲೆಯಲ್ಲಿ ೨,೦೦೦ ರೂ. ಏರಿಕೆಯಾಗಿರುವುದು ವ್ಯಾಪಾರಸ್ಥರಲ್ಲೂ ಆತಂಕ ಮೂಡಿಸಿದೆ.
ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕೊರತೆ ಉಂಟಾಗುತ್ತಿದೆಯೇ ಎಂಬ ಚರ್ಚೆಗಳು ಒಂದೆಡೆ ನಡೆಯುತ್ತಿವೆ. ಆದರೆ, ಬೆಲೆ ಏರಿಕೆಗೆ ಕಬ್ಬಿನ ಪೂರೈಕೆಯ ಕೊರತೆ, ಮಳೆಯ ಅಭಾವದಿಂದ ಇಳುವರಿ ಕುಸಿತ ಮತ್ತು ಗಾಣಗಳಲ್ಲಿ ಬೆಲ್ಲದ ಉತ್ಪಾದನೆ ಇಳಿಮುಖವಾಗಿರುವುದು ಇನ್ನೊಂದು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಆರು ತಿಂಗಳಿಂದ ಮಳೆ ಇಲ್ಲದೆ ಕಬ್ಬಿಗೆ ನೀರಿನ ಪೂರೈಕೆಯಾಗಿಲ್ಲ. ಇದರಿಂದಾಗಿ ಕಬ್ಬಿನ ಗದ್ದೆಗಳು ಒಣಗಿ ನಿಂತಿವೆ. ಕಬ್ಬಿನ ಇಳುವರಿ ಅರ್ಧದಷ್ಟು ಕಡಿಮೆಯಾಗಿದೆ. ಪ್ರತಿದಿನ ೧೦ ರಿಂದ ೧೨ ಲಾರಿಯಷ್ಟು ಬೆಲ್ಲ ಮಾರುಕಟ್ಟೆಗೆ ಹೋಗುತಿತ್ತು. ಇದೀಗ ಅರ್ಧದಷ್ಟು ಕಡಿಮೆಯಾಗಿದೆ. ಬೆಲ್ಲದ ಮಾರುಕಟ್ಟೆ ಪ್ರಾರಂಭವಾದ ದಿನದಿಂದಲೂ ಇಷ್ಟೊಂದು ಪ್ರಮಾಣದ ದರ ಏರಿಕೆಯಾಗಿರಿಲ್ಲ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಖರ್ಗೆ ವಾಗ್ದಾಳಿ :
ಸಕ್ಕರೆ-ಬೆಲ್ಲದ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ನೀತಿಗಳು ಮತ್ತು ಎಥೆನಾಲ್ ಕಚ್ಚಾ ವಸ್ತುಗಳ ಬಳಕೆಯಿಂದ ಸಕ್ಕರೆ ಬೆಲೆ ಏರಿಕೆಯಾಗಿದ್ದು,ಹಬ್ಬದ ಸೀಸನ್‌ನಲ್ಲಿ ಜನಸಾಮಾನ್ಯರ ಮೇಲೆ ಹೊರೆಯಾಗಿದೆ.
ಪೆಟ್ರೋಲ್ ಜತೆಗೆ ಬೆಸೆಯಲು ಎಥೆನಾಲ್ ಮಾಡಲು ಕಬ್ಬನ್ನು ಬಳಸುವುದು ಮತ್ತು ಮತ್ತೊಂದೆಡೆ ವಿದೇಶದಿಂದ ಸಕ್ಕರೆ ಆಮದು ಮಾಡಿಕೊಳ್ಳುವುದು ಯಾವ ರೀತಿಯ ಸ್ವಾವಲಂಬನೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.


































