Home ಮುಖಪುಟ ಸುದ್ದಿ ಮುಕ್ತ ಮೆರಿಟ್ ವಿದ್ಯಾರ್ಥಿಗೂ ಮೀಸಲಾತಿ ಅವಕಾಶ

ಮುಕ್ತ ಮೆರಿಟ್ ವಿದ್ಯಾರ್ಥಿಗೂ ಮೀಸಲಾತಿ ಅವಕಾಶ

ನವದೆಹಲಿ.ಆ.೨೨- ಮುಕ್ತ ವರ್ಗದ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗುವ ಮೀಸಲಾತಿ ವರ್ಗದ ಅಭ್ಯರ್ಥಿಯು, ತನಗಿಂತ ಕಡಿಮೆ ಅಂಕ ಗಳಿಸಿ ಮೀಸಲಾತಿ ಕೋಟಾದಡಿ ಉತ್ತಮ ಹುದ್ದೆ ಪಡೆಯುವ ಅಭ್ಯರ್ಥಿಗಿಂತ ಹೆಚ್ಚಿನ ಆದ್ಯತೆಯ ಹುದ್ದೆಯನ್ನು ಪಡೆಯಲು ಅರ್ಹನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಕೇಂದ್ರ ಸರ್ಕಾರ ಮತ್ತು ರಮೇಶ್ ರಾಮ್ (೨೦೧೦) ಪ್ರಕರಣದ ಸಾಂವಿಧಾನಿಕ ಪೀಠದ ತೀರ್ಪು ಸೇರಿದಂತೆ ಹಲವು ತೀರ್ಪುಗಳಲ್ಲಿ ಈ ಕಾನೂನು ನಿಯಮ ಈಗಾಗಲೇ ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಪುನರುಚ್ಚರಿಸಿದೆ.

ಪ್ರಕರಣದ ಹಿನ್ನೆಲೆ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ ನಡೆಸಿದ ೬ನೇ ಸಂಯುಕ್ತ ನಾಗರಿಕ ಸೇವಾ ಪರೀಕ್ಷೆಯ ಸೇವಾ ಹಂಚಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ಬಂದಿದೆ. ಚಂದನ್, ಸಂಜಯ್ ಕುಮಾರ್ ಮಹತೋ, ಗೌತಮ್ ಕುಮಾರ್ ಹಾಗೂ ಕುಮಾರ್ ಅವಿನಾಶ್ ಎಂಬ ನಾಲ್ವರು ಮೀಸಲಾತಿ ವರ್ಗದ ಅಭ್ಯರ್ಥಿಗಳು ಮುಕ್ತ ಮೆರಿಟ್ ಆಧಾರದಲ್ಲಿ ಆಯ್ಕೆಯಾಗಿದ್ದರು.

ಆದರೆ, ಅವರಿಗೆ ಜಾರ್ಖಂಡ್ ಆಡಳಿತ ಸೇವೆ ಬದಲಿಗೆ ಇತರ ಸೇವೆಗಳನ್ನು (ಹಣಕಾಸು, ಮಾಹಿತಿ, ಯೋಜನೆ ಇತ್ಯಾದಿ) ನೀಡಲಾಗಿತ್ತು ತಮಗಿಂತ ಕಡಿಮೆ ಅಂಕ ಪಡೆದ ಮೀಸಲಾತಿ ವರ್ಗದ ಇತರ ಅಭ್ಯರ್ಥಿಗಳಿಗೆ ಜಾರ್ಖಂಡ್ ಆಡಳಿತ ಸೇವೆಯ ಉತ್ತಮ ಹುದ್ದೆಗಳನ್ನು ನೀಡಲಾಗಿತ್ತು.

ಹೈಕೋರ್ಟ್ ತೀರ್ಪು:

ನಿಯಮಾವಳಿಯ ಕ್ಲಾಸ್ ೮ರ ಪ್ರಕಾರ ಯಾವುದೇ ವಿನಾಯಿತಿ ಪಡೆಯದೇ ಮುಕ್ತ ಮೆರಿಟ್‌ನಲ್ಲಿ ಆಯ್ಕೆಯಾದ ಕಾರಣ ಅವರನ್ನು ಮುಕ್ತ ವರ್ಗದಲ್ಲೇ ಪರಿಗಣಿಸಿರುವುದು ಸರಿಯಾಗಿದೆ ಎಂದು ಜಾರ್ಖಂಡ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.
ಮೆರಿಟ್ ಅಭ್ಯರ್ಥಿಯ ಹಕ್ಕುಹೆಚ್ಚು ಅಂಕ ಗಳಿಸಿ ಮುಕ್ತ ವರ್ಗಕ್ಕೆ ಆಯ್ಕೆಯಾದ ಮೀಸಲಾತಿ ಅಭ್ಯರ್ಥಿಗೆ ಉತ್ತಮ ಹುದ್ದೆ ವಂಚಿತವಾಗಬಾರದು.ವಿನಾಯಿತಿ ಪರಿಶೀಲನೆ ಅರ್ಜಿದಾರರು ಪರೀಕ್ಷೆಯಲ್ಲಿ ಯಾವುದೇ ಸಡಿಲಿಕೆ/ವಿನಾಯಿತಿ ಪಡೆದಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.
ಮುಂದಿನ ಕ್ರಮ ಅರ್ಜಿದಾರರು ವಿನಾಯಿತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ೬ ವಾರಗಳ ಕಾಲಾವಕಾಶ ನೀಡಲಾಗಿದೆ.ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂಬರುವ ಆಗಸ್ಟ್ ೨೫, ೨೦೨೬ ಕ್ಕೆ ಮುಂದೂಡಿದೆ.