Home ಜಿಲ್ಲೆ ಕಲಬುರಗಿ ಮಹಾದಾಸೋಹ ಪರಿಧಿಯನ್ನು ವಿಶಾಲಗೊಳಿಸಿದ ಡಾ.ಅಪ್ಪ

ಮಹಾದಾಸೋಹ ಪರಿಧಿಯನ್ನು ವಿಶಾಲಗೊಳಿಸಿದ ಡಾ.ಅಪ್ಪ

ಕಲಬುರಗಿ,ಆ.22: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹದ ಪರಿಕಲ್ಪನೆಯು ಕೇವಲ ಅನ್ನ ನೀಡುವುದಕ್ಕೆ ಸೀಮಿತವಾಗಿರದೆ, ಜ್ಞಾನ, ಶಿಕ್ಷಣ, ಸಂಸ್ಕøತಿ ಬೆಳೆಸಿ ಅದರ ಪರಿಧಿಯನ್ನು ವಿಶಾಲಗೊಳಿಸಿದ್ದ ಮಹನೀಯರು ಎಂದು ಶರಣಬಸವ ವಿವಿಯ ಆಂಗ್ಲವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪಾಟೀಲ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಪರಿಕಲ್ಪನೆ ವಿಷಯ ಕುರಿತು ಮಾತನಾಡಿದರು. ಮಹಾದಾಸೋಹದ ಮೊದಲ ಮತ್ತು ಪ್ರಮುಖ ಆಯಾಮವೆಂದರೆ ಅನ್ನದಾಸೋಹ. ಹಸಿದವರಿಗೆ ಅನ್ನ ನೀಡುವುದು, ಭಕ್ತರಿಗೆ ಹಾಗೂ ಸಮಾಜದ ವಿವಿಧ ವರ್ಗದ ಜನರಿಗೆ ಆಹಾರ ಒದಗಿಸುವುದನ್ನು ಪೂಜ್ಯ ಡಾ.ಅಪ್ಪ ಮಾಡಿದರು.
ಅವರ ಮಹಾದಾಸೋಹ ಪರಿಕಲ್ಪನೆಯ ಅತ್ಯಂತ ಪ್ರಮುಖ ಅಂಶ ಜ್ಞಾನದಾಸೋಹ. ಅವರ ದೃಷ್ಟಿಯಲ್ಲಿ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ರೂಪಿಸಿ ಸಮಾಜದ ಸೇವೆಗೆ ಸಿದ್ಧಗೊಳಿಸುವ ಮಾಧ್ಯಮ. ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನವನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವ ಪ್ರಯತ್ನಕ್ಕೆ ಅವರು ಮಹತ್ವ ನೀಡಿದರು.
ಅಪ್ಪನವರ ಮಹಾದಾಸೋಹದ ವಿಶಿಷ್ಟತೆಯೆಂದರೆ ಶಿಕ್ಷಣವನ್ನು ದಾಸೋಹದ ಒಂದು ರೂಪವಾಗಿ ಪರಿಗಣಿಸಿದ್ದು. ಅವರ ಶಿಕ್ಷಣದ ತತ್ವದಲ್ಲಿ, ಕಲಿಯುವುದು ಮತ್ತು ಕಲಿಸುವುದು ಕೇವಲ ಜೀವನೋಪಾಯಕ್ಕಾಗಿ ಇರಬಾರದು, ಅದು ಇತರರ ಕಲ್ಯಾಣಕ್ಕೂ ಸಹಕಾರಿಯಾಗಬೇಕು. ಈ ಕಾರಣದಿಂದ ಅವರ ನೇತೃತ್ವದ ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ಸಮಾಜಕ್ಕೆ ಅರ್ಪಿಸುವ ಕೇಂದ್ರಗಳಾಗಿ ಬೆಳೆದವು.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಪರಿಕಲ್ಪನೆಯ ಮೂಲ ಆಶಯ ‘ನಾವು ಗಳಿಸಿದ್ದನ್ನು ಸಮಾಜಕ್ಕೆ ಮರಳಿ ನೀಡಬೇಕು’ ಎಂಬುದು. ಅನ್ನ ನೀಡುವುದರಿಂದ ಆರಂಭವಾಗುವ ದಾಸೋಹವು ಜ್ಞಾನ ನೀಡುವ ಹಂತಕ್ಕೆ, ಅಲ್ಲಿಂದ ಶಿಕ್ಷಣ, ಸಂಸ್ಕೃತಿ, ಮಾನವೀಯತೆ ಮತ್ತು ಸಾಮಾಜಿಕ ಅಭಿವೃದ್ಧಿಯಾಗಿತ್ತು.
ಹೀಗಾಗಿ ಅವರ ಮಹಾದಾಸೋಹವನ್ನು “ಅನ್ನದಾಸೋಹದಿಂದ ಜ್ಞಾನದಾಸೋಹದವರೆಗೆ, ವೈಯಕ್ತಿಕ ಸೇವೆಯಿಂದ ಸಾಮಾಜಿಕ ಪರಿವರ್ತನೆಯವರೆಗೆ ಸಾಗಿದ ಸಮಗ್ರ ಸೇವಾ ತತ್ವ” ಎಂದು ಹೇಳಬಹುದು. ಈ ಪರಿಕಲ್ಪನೆಯೇ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಅವರ ಕೊಡುಗೆಯ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.