
ಬೆಂಗಳೂರು, ಜೂ.೨- ಮತದಾರರ ಪಟ್ಟಿಯಿಂದ ಅನರ್ಹ ಮತದಾರರ ಹೆಸರನ್ನು ಕೈಬಿಟ್ಟು, ಅರ್ಹ ಮತದಾರರು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯ ಪ್ರಮುಖ ಉದ್ದೇಶವಾಗಿದೆ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಮಾಲಿಕೆಯಲ್ಲಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಹಾಗೂ ಚುನಾವಣಾ ಕಾರ್ಯಗಳಿಗೆ ಸಂಬಂಧಿಸಿದಂತೆ ವಿಜಯನಗರ, ಬಸವನಗುಡಿ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳಾದ (ಬಿಎಲ್ಒ) ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮ್ಯಾಪಿಂಗ್, ಅನ್ಮ್ಯಾಪಿಂಗ್ ಹಾಗೂ ರಿ-ಮ್ಯಾಪಿಂಗ್ ಕಾರ್ಯಗಳನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ನೂತನ ಬಿಎಲ್ಒಗಳಿಗೆ ಸಮರ್ಪಕ ತರಬೇತಿ ನೀಡುವ ಜೊತೆಗೆ, ಮತಗಟ್ಟೆಗಳಲ್ಲಿ ಅಂತರ್ಜಾಲ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕೃತ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಮತಗಟ್ಟೆ ಏಜೆಂಟ್ಗಳ (ಬಿಎಲ್ಎ) ಸಹಕಾರ ಪಡೆದು ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ಮಾತನಾಡಿ, ಎಸ್ಐಆರ್ ಸಂಪೂರ್ಣ ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಯಾಗಿದ್ದು, ಮುಂದಿನ ಐದು ತಿಂಗಳು ಬಿಎಲ್ಒಗಳ ಕಾರ್ಯಕ್ಷಮತೆ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದರು.
ಜೂನ್ ೩೦ರಿಂದ ಜುಲೈ ೨೯ರವರೆಗೆ ನಡೆಯುವ ಮನೆ-ಮನೆ ಭೇಟಿ ಕಾರ್ಯಕ್ರಮದಲ್ಲಿ ಎಲ್ಲ ಅರ್ಹ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸುವ ಜವಾಬ್ದಾರಿ ಬಿಎಲ್ಒಗಳ ಮೇಲಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಬೇಕಾದರೆ ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡುವುದು ಕಡ್ಡಾಯವಾಗಿದೆ. ಅಗತ್ಯ ದಾಖಲೆಗಳಿಲ್ಲದ ಮತದಾರರಿಗೆ ನೋಟಿಸ್ ನೀಡಿ, ದಾಖಲೆ ಸಲ್ಲಿಕೆಯಾದ ಬಳಿಕವೇ ಹೆಸರು ಸೇರ್ಪಡೆಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಅಪರ ಆಯುಕ್ತೆ ಕವಿತಾ ರಾಜರಾಮ್, ಸಹಾಯಕ ಆಯುಕ್ತ (ಚುನಾವಣೆ) ರಾಮದಾಸ್, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್ಒ ಸೂಪರ್ವೈಸರ್ಗಳು ಹಾಗೂ ಬಿಎಲ್ಒಗಳು ಉಪಸ್ಥಿತರಿದ್ದರು.


























