
ನವದೆಹಲಿ/ಬೆಂಗಳೂರು.ಆ೧:ಸಾರ್ವಜನಿಕ ರಂಗದ ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್ ೧ರಿಂದ ಜಾರಿಗೆ ಬರುವಂತೆ ೧೯ ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ೨೦೦ರೂ. ಇಳಿಕೆ ಮಾಡಿವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಸತತ ಎರಡನೇ ತಿಂಗಳು ಬೆಲೆ ಇಳಿಕೆ ಮಾಡಿರುವುದು ವಾಣಿಜ್ಯ ವಲಯಕ್ಕೆ ದೊಡ್ಡ ರಿಲೀಫ್ ನೀಡಿದೆ.
ಆದಾಗ್ಯೂ, ಮನೆಗಳಲ್ಲಿ ಬಳಸುವ ೧೪.೨ ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
“ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ದರದಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ಉದ್ಯಮಗಳು ಸಂಕಷ್ಟಕ್ಕೀಡಾಗಿದ್ದವು. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅನುಕ್ರಮವಾಗಿ ಬೆಲೆ ಇಳಿಕೆಯಾಗಿರುವುದು ನಿರ್ವಹಣಾ ವೆಚ್ಚ ತಗ್ಗಿಸಲು ನೆರವಾಗಲಿದೆ” ಎಂದು ಹೋಟೆಲ್ ಮಾಲೀಕರ ಸಂಘ ಹರ್ಷ ವ್ಯಕ್ತಪಡಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿದ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರೂ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಅಭಾವ ಉಂಟಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ದೇಶದ ಇಂಧನ ಭದ್ರತೆಯ ಪರಿಶೀಲನೆ ನಡೆಸಲಾಗಿದೆ.
ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಭಾರತವು ೨೦೨೭ರಿಂದ ತನ್ನ ಎಲ್‌ಪಿಜಿ ಅಗತ್ಯದ ಶೇ. ೨೫ರಷ್ಟನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಯೋಜನೆ ರೂಪಿಸಿದೆ.
೫ ಕೆ.ಜಿ. ಸಿಲಿಂಡರ್ ದರ ಇಳಿಕೆ
ಐದು ಕೆ.ಜಿ. ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್ ದರವನ್ನು ಶೇ. ೧೩ ರಷ್ಟು ತೈಲ ಕಂಪನಿಗಳು ಕಡಿಮೆ ಮಾಡಿವೆ.
ದೆಹಲಿಯಲ್ಲಿ ಸಿಲಿಂಡರ್ ಚಿಲ್ಲರೆ ಬೆಲೆ ೮೦೮.೫೦ ರೂ.ಗಳಿಗೆ ಪರಿಷ್ಕರಿಸಲಾಗಿದೆ.
ಕಳೆದ ಜೂನ್‌ನಲ್ಲಿ ೧೪.೨ ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ೨೯ರೂ. ಗಳಷ್ಟು ಹೆಚ್ಚಾಗಿದ್ದು ದೆಹಲಿಯಲ್ಲಿ ಚಿಲ್ಲರೆ ಬೆಲೆ ೯೧೩ರೂ. ಗಳಿಂದ ೯೪೨ ರೂ.ಗಳಿಗೆ ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ ಹೊಸ ದರಗಳ ವಿವರ
ದೆಹಲಿ: ೨೦೨ ಕಡಿತಗೊಂಡಿದ್ದು, ಹೊಸ ದರ ೨,೭೨೮
ಕೋಲ್ಕತ್ತಾ: ೨೦೯ ಇಳಿಕೆಯಾಗಿದ್ದು, ಹೊಸ ದರ ?೨,೮೭೨.೫೦
ಬೆಂಗಳೂರು: ೨,೮೨೧
ಮುಂಬೈ: ೨,೬೯೧
































