Home ಮುಖಪುಟ ಸುದ್ದಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಆ. ೯ ರಿಂದ ಜೆಡಿಎಸ್ ಪಾದಯಾತ್ರೆ

ಬಿಡದಿ ಟೌನ್‌ಶಿಪ್ ವಿರೋಧಿಸಿ ಆ. ೯ ರಿಂದ ಜೆಡಿಎಸ್ ಪಾದಯಾತ್ರೆ

ಬೆಂಗಳೂರು, ಆ. ೧- ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಇದೇ ತಿಂಗಳ ೯ ರಿಂದ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸಲಿದೆ.


ಚನ್ನಮ್ಮದೇವೇಗೌಡರ ನಿಧನದಿಂದ ಮುಂದೂಡಿಕೆಯಾಗಿದ್ದ ಪಾದಯಾತ್ರೆಗೆ ಈಗ ಹೊಸ ದಿನಾಂಕ ನಿಗದಿ ಮಾಡಲಾಗಿದ್ದು, ಮೈತ್ರಿ ಪಕ್ಷ ಬಿಜೆಪಿಯನ್ನು ದೂರವಿಟ್ಟು ಜೆಡಿಎಸ್ ಪಾದಯಾತ್ರೆ ನಡೆಸಲಿದೆ.


ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ನಡೆಸಲಿರುವ ಪಾದಯಾತ್ರೆಯ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿಯವರು ಆ. ೯, ೧೦ ಹಾಗೂ ೧೧ ಈ ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದ್ದಾರೆ.


ಆ. ೯ ರಂದು ಬಿಡದಿಯ ಬೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿಯವರು ಪಾದಯಾತ್ರೆಗೆ ಚಾಲನೆ ನೀಡುವರು ಎಂದು ಅವರು ತಿಳಿಸಿದ್ದಾರೆ.


ಆ. ೯ ರಂದು ಆರಂಭವಾಗಲಿರುವ ಪಾದಯಾತ್ರೆ ಆ. ೧೧ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ತಲುಪಲಿದೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂದು ಜೆಡಿಎಸ್‌ನ ಬೃಹತ್ ಸಮಾವೇಶ ನಡೆಯಲಿದೆ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.


ಈ ಮೂರು ದಿನಗಳ ಪಾದಯಾತ್ರೆಯಲ್ಲಿ ೧ ದಿನ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಳ್ಳುವರು ಎಂದು ಅವರು ಹೇಳಿದ್ದಾರೆ.
ಈ ಮೂರು ದಿನಗಳ ಪಾದಯಾತ್ರೆ ಮುಗಿದ ಬಳಿ ಆ. ೧೪ ರಂದು ಜೆಡಿಎಸ್ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೂ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.


ಈ ಹಿಂದೆ ಬಿಡದಿ ಟೌನ್‌ಶಿಪ್ ವಿರೋಧಿಸಿ ಜುಲೈ ೩೧ ರಿಂದ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿತ್ತಾದರೂ ಚೆನ್ನಮ್ಮದೇವೇಗೌಡರ ನಿಧನದಿಂದ ಪಾದಯಾತ್ರೆಯನ್ನು ಮುಂದೂಡಲಾಗಿತ್ತು.


ಬಿಡದಿ ಟೌನ್‌ಶಿಪ್ ನೆಪದಲ್ಲಿ ೬ ಕಂದಾಯ ಗ್ರಾಮಗಳ ಬಡ ರೈತರ ಕೃಷಿ ಭೂಮಿಯನ್ನು ಕಬಳಿಸಲು ಹೊರಟಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ನ್ಯಾಯಯುತ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.


ರೈತರ ಹಿತರಕ್ಷಣೆಗಾಗಿ ನಡೆಯುತ್ತಿರುವ ಈ ಬೃಹತ್ ಪಾದಯಾತ್ರೆಯಲ್ಲಿ ನಾಡಿನ ಜನತೆ, ರೈತ ಬಾಂಧವರು ಹಾಗೂ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಬೆಂಬಲಿಸುವಂತೆಯೂ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.