Home ಮುಖಪುಟ ಸುದ್ದಿ ಹಲವೆಡೆ ಮಳೆ: ಭರ್ತಿಯತ್ತ ಜಲಾಶಯಗಳು

ಹಲವೆಡೆ ಮಳೆ: ಭರ್ತಿಯತ್ತ ಜಲಾಶಯಗಳು

ಬೆಂಗಳೂರು,ಆ.೧: ರಾಜ್ಯದಲ್ಲಿ ಬರಗಾಲ ನಡುವೆಯೂ ಮಲೆನಾಡು, ಕರಾವಳಿ ಭಾಗ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿವೆ.


ಅದರಲ್ಲೂ ಹೇಮಾವತಿಗೆ ೧೧ ಟಿಎಂಸಿ ನೀರು ಸೇರ್ಪಡೆಯಾದರೆ ಆಲಮಟ್ಟಿ ಭರ್ತಿ ಹಂತಕ್ಕೆ ತಲುಪಿದೆ.ಉಳಿದಂತೆ ತುಂಗಾ ಜಲಾಶಯಗಳು ಭರ್ತಿಯಾಗಿದ್ದು, ಕಬಿನಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಅರ್ಭಟದಿಂದ ಹಾರಂಗಿ ಜಲಾಶಯದಿಂದ ೧೩,೦೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.


ಹಾಸನ ಜಿಲ್ಲೆಯಲ್ಲಿ ಬರಗಾಲದ ಭೀತಿಯ ನಡುವೆಯೂ ಕಳೆದ ಒಂದೂವರೆ ತಿಂಗಳಿನಿಂದ ಸುರಿದ ಸಾಧಾರಣ ಮಳೆಗೆ ಗೊರೂರಿನ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ ೧೧ ಟಿಎಂಸಿ ನೀರು ಜಲಾಶಯವನ್ನು ಸೇರಿದ್ದು, ಜೂನ್ ಆರಂಭದಲ್ಲಿದ್ದ ನೀರಿನ ಮಟ್ಟಕ್ಕೆ ಹೋಲಿಸಿದರೆ ಪ್ರಸ್ತುತ ಜಲಾಶಯದ ನೀರು ೧೯ ಅಡಿಗಳಷ್ಟು ಏರಿಕೆಯಾಗಿದೆ.


ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ ೧೧,೬೮೬ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದ ನೀರಿನ ಮಟ್ಟ ೨,೮೯೦ ಅಡಿಯಿಂದ ೨,೯೦೯ ಅಡಿಗೆ ಏರಿಕೆಯಾಗಿದೆ. ಒಟ್ಟು ೩೭ ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ೨೫.೯೮೬ ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಶೇ ೬೫ ರಷ್ಟು ಭರ್ತಿಯಾಗಿದೆ. ಕಾವೇರಿ ಜಲವಿವಾದದ ನಡುವೆಯೂ ಗೊರೂರು ಜಲಾಶಯಕ್ಕೆ ನೀರು ಸಮೃದ್ಧವಾಗಿ ಹರಿದುಬರುತ್ತಿರುವುದು ಹಾಸನದ ಜನತೆ ಹಾಗೂ ರೈತರಲ್ಲಿ ಸಂತಸ ತಂದಿದೆ.


ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯವು ಭರ್ತಿಯಾಗುವ ಅಂಚಿನಲ್ಲಿದೆ.ಕಬಿನಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದ್ದು,ಕಳೆದ ೨೪ ಗಂಟೆಗಳಲ್ಲಿ ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ ೬೦ ಮಿ.ಮೀ. ಮಳೆ ದಾಖಲಾಗಿದೆ.


ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಅಂಕಿ-ಅಂಶಗಳ ಪ್ರಕಾರ ಜಲಾಶಯದ ನೀರಿನ ಮಟ್ಟ ೨೨೮೦.೦೮ ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿ ಮಟ್ಟ ಮತ್ತು ಸಂಗ್ರಹ ಸ್ವಲ್ಪ ಕಡಿಮೆಯಿದೆ. ಜಲಾಶಯಕ್ಕೆ ಇಂದು ೧೧,೭೪೭ ಕ್ಯೂಸೆಕ್ ನೀರು ಒಳಹರಿವು ಹರಿದು ಬರುತ್ತಿದೆ. ಕಳೆದ ವರ್ಷ ೮,೯೬೩ ಕ್ಯೂಸೆಕ್ ಇತ್ತು. ನದಿಗೆ ೫೦೦ ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತಿದೆ. ಕಳೆದ ವರ್ಷ ೮,೫೦೦ ಕ್ಯೂಸೆಕ್ ಹೊರಬಿಡಲಾಗಿತ್ತು.ಇಂದು ರಾತ್ರಿಯ ವೇಳೆಗೆ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಕಬಿನಿ ಜಲಾಶಯ ಭರ್ತಿಯಾಗುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.


ಈ ನಡುವೆ ಭರ್ತಿಯಾದ ಜಲಾಶಯದ ನೀರನ್ನು ಕಬಿನಿ ಡ್ಯಾಮ್ ಕೆಳಗೆ ಬರುವ ನಾಲೆಗಳಿಗೆ ಮತ್ತು ಕಬಿನಿ ಡ್ಯಾಮ್ ಕೆಳಗಡೆ ಬರುವ ಕೆರೆಗಳಿಗೆ ನೀರು ಹರಿಸಲು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.


ಇದೇ ವೇಳೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕಾವೇರಿ ನದಿಗೆ ೧೩ ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.


ಕಳೆದ ನಾಲ್ಕು ಐದು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಅದರಲ್ಲೂ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದಲ್ಲಿ ರಾತ್ರಿ ಪೂರ್ತಿ ಸುರಿದ ಭಾರೀ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಜಲಪಾತಕ್ಕೆ ಈಗಾಗಲೇ ೧೧,೦೦೦ ಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಸುರಕ್ಷತಾ ಮಿತಿಯತ್ತ ತಲುಪಿದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿಗೆ ೧೩ ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಬಿಡುತ್ತಿದ್ದಾರೆ. ಹಾರಂಗಿಯಿಂದ ಬಿಡುಗಡೆಯಾಗುತ್ತಿರುವ ನೀರು ಕಾವೇರಿ ಮೂಲಕ ಕೃಷ್ಣರಾಜ ಸಾಗರ ಜಲಾಶಯದತ್ತ ಹರಿಯಲಿದ್ದು, ಮಾರ್ಗಮಧ್ಯದ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕೆಂದು ನೀರಾವರಿ ಇಲಾಖೆ ಸೂಚನೆ ನೀಡಿದೆ. ನದಿ ತೀರಕ್ಕೆ ಅನಗತ್ಯವಾಗಿ ತೆರಳದಂತೆ ಹಾಗೂ ಜಾನುವಾರುಗಳನ್ನು ನದಿಯ ಬಳಿ ಮೇಯಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ಇಂದು ರಾತ್ರಿಯಿಂದಲೇ ಸಾವಿರಾರು ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ಏಖS ಅಣೆಕಟ್ಟಿಗೆ ಆರ್ಧ ಟಿಎಂಸಿ ನೀರು ಸೇರುವ ನೀರಿಕ್ಷೆ ಇದೆ.


ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಭರ್ತಿ ಹಂತ ತಲುಪಿದೆ. ಉಳಿದಂತೆ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಾಜನೂರಿನ ತುಂಗಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂನ ೨೨ ಕ್ರಸ್ಟ್ ಗೇಟ್‌ಗಳನ್ನು ತೆಗೆದು ೫೫,೦೦೦ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ. ಕೃಷಿ ಚಟುವಟಿಕೆಗೆ ಮಳೆ ಕೊರತೆಯಿಂದ ಆತಂಕದಲ್ಲಿದ್ದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಯ ರೈತರಿಗೆ ಜಲಾಶಯ ಭರ್ತಿಯಾಗಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.


ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದ್ದು ರಾಯಚೂರಿನಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು,ರಾಯಚೂರು ತಾಲೂಕಿನ ಕಾಡ್ಲೂರಿನಲ್ಲಿ ನದಿ ದಂಡೆಯಲ್ಲಿರುವ ಶ್ರೀಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಈಗ ಜಲಾವೃತವಾಗಿದೆ.


ದೇವಸ್ಥಾನಕ್ಕೆ ಭಕ್ತರು ತೆರಳದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.ಕೃಷ್ಣಾ ಮೇಲ್ಬಾಗದಲ್ಲಿ ಉತ್ತಮ ಮಳೆ ಹಿನ್ನೆಲೆ ಜಲಾಶಯ ಭರ್ತಿಯಾಗುವ ಹಂತದಲ್ಲಿದೆ.ಡ್ಯಾಮ್ ಭರ್ತಿಯಾಗಲು ಇನ್ನೂ ನಾಲ್ಕು ಟಿಎಂಸಿ ಮಾತ್ರ ಬಾಕಿಯಿದೆ. ಹೀಗಾಗಿ ಸದ್ಯ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ೧ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.ಜಲಾಶಯಕ್ಕೆ ೧.೧ ಲಕ್ಷ ಕ್ಯೂಸೆಕ್ ಒಳಹರಿವು ಇದೆ.