
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೮: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಎನ್‌ಟಿಪಿಸಿ, ಕೆಎಸ್‌ಟಿಡಿಸಿ ಹಾಗೂ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಐತಿಹಾಸಿಕ ಇಬ್ರಾಹಿಂ ರೋಜಾ ಆವರಣದಲ್ಲಿ ಜಿಲ್ಲಾ ಮಟ್ಟದ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.
ಪ್ರದರ್ಶನವನ್ನು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಜಯಪುರದ ಐತಿಹಾಸಿಕ ಸ್ಮಾರಕಗಳ ಸೌಂದರ್ಯವನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಅತ್ಯುತ್ತಮವಾಗಿ ಸೆರೆಹಿಡಿದು, ಅವುಗಳ ಕಲಾತ್ಮಕತೆಯನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಮೂಲ್ಯವಾಗಿದೆ ಎಂದರು.
ಇದು ಸಂಗ್ರಹಯೋಗ್ಯ ಛಾಯಾಚಿತ್ರಗಳ ಪ್ರದರ್ಶನವಾಗಿದ್ದು, ಇಂತಹ ಕಲಾತ್ಮಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇಂತಹ ಪ್ರಯತ್ನಗಳಿಂದ ವಿಜಯಪುರದ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾAತ ಶೆಟ್ಟಿ ಮಾತನಾಡಿ, ಕಲಾವಿದರು ಹಾಗೂ ಛಾಯಾಗ್ರಾಹಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ, ಪ್ರವಾಸಿ ಅಧಿಕಾರಿ ಅನಿಲ ಬಣಜಿಗೇರ, ಹೋಟೆಲ್ ಉದ್ಯಮಿ ಶಾಂತೇಶ ಕಳಸಗೊಂಡ, ಎನ್‌ಟಿಪಿಸಿ ಕಾರ್ಯನಿರ್ವಾಹಕ ಕಾರ್ಪೊರೇಟ್ ಸಂಪರ್ಕಾಧಿಕಾರಿ ಪೂಜಾ ಪಾಂಡೆ, ಹಿರಿಯ ಕಲಾವಿದರಾದ ಪಿ.ಎಸ್. ಕಡೇಮನಿ, ವಿದ್ಯಾಧರ ಸಾಲಿ, ಬಿ.ಎಸ್. ಪಾಟೀಲ, ರಮೇಶ ಚವ್ಹಾಣ, ಪ್ರಶಾಂತ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಪಾರ್ವತಿ ಹಾಗೂ ಸುಭಾಷ ಪವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಛಾಯಾಚಿತ್ರ ಸ್ಪರ್ಧೆ: ಸಂತೋಷ ಹುಣಸಗಿಗೆ ಪ್ರಥಮ
ಪ್ರದರ್ಶನದ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಸಂತೋಷ ಹುಣಸಗಿ ಪ್ರಥಮ, ಪವನಕುಮಾರ ಅಂಗಡಿ ದ್ವಿತೀಯ, ಶಶಿಕುಮಾರ ಕುಂಬಾರ ತೃತೀಯ ಸ್ಥಾನ ಪಡೆದರು. ಗೌಡಪ್ಪಗೌಡ ಬಿರಾದಾರ ಹಾಗೂ ಎಂ. ಉಕ್ಕಲಿ ಅವರಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ಬಸವರಾಜ ಸರ್ಜಾಪುರ, ಪ್ರಭಾಕರ ಅರಕೇರಿ, ವಿಠ್ಠಲ ಗುಜ್ಜರ, ಸುರೇಶ ಗಲ್ಪಿ, ಪ್ರಮೋದ ಕಾಜಗಾರ, ಬಾಳು ಕಲಾಲ, ಜಿ.ಜೆ. ಗಲಗಲಿ, ಬಿ.ಎಲ್. ಕುಲಕರ್ಣಿ, ಗುರುಸಂಗಯ್ಯ ಮಠಪತಿ, ಸಂಕೇತ ಪವಾರ, ಎಂ. ಪ್ರಭು, ಅಶೋಕ ಸಾರವಾಡ, ಸುರೇಶ ರಾಠೋಡ, ವೀರೇಶ ಶಿವಸಿಂಪಿ, ಸತೀಶ ಜಾಧವ, ಸತೀಶ ಕಲಾಲ, ಶಿವಕುಮಾರ ಗಡಶೆಟ್ಟಿ, ಗುರುರಾಜ ಪಲ್ಲೇದ, ರಾಜು ರಜಪೂತ, ಬಸವರಾಜ ಕುಂಬಾರ ಸೇರಿದಂತೆ ಛಾಯಾಗ್ರಾಹಕರು ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದರು.
ಐತಿಹಾಸಿಕ ಸ್ಮಾರಕಗಳು, ವಿಜಯಪುರದ ವಾಸ್ತುಶಿಲ್ಪ ಹಾಗೂ ನಗರದ ವಿವಿಧ ದೃಶ್ಯಗಳನ್ನು ಒಳಗೊಂಡ ಛಾಯಾಚಿತ್ರಗಳು ನೋಡುಗರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾದವು.


























