Home ಜಿಲ್ಲೆ ಕಲಬುರಗಿ ಕಣ್ವ ಮಠಾಧೀಶರೊಂದಿಗೆ ಕೆಲ ಕ್ಷಣಗಳು

ಕಣ್ವ ಮಠಾಧೀಶರೊಂದಿಗೆ ಕೆಲ ಕ್ಷಣಗಳು

ಕಲಬುರಗಿ: ಶ್ರೀಮತ್ ಕಣ್ವಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವವಿರಾಜತೀರ್ಥರೊಂದಿಗೆ ಕೆಲವೊಂದು ವಿಷಯಗಳನ್ನು ಚರ್ಚಿಸುವ, ಕೆಲವು ಅಮೂಲ್ಯ ಕ್ಷಣಗಳನ್ನು ಕಳೆಯುವ ಅಪರೂಪದ ಸುಯೋಗ ನನಗೆ 12.10.2026 ಸೋಮವಾರದಂದು ಪ್ರಾಪ್ತವಾಗಿತ್ತು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಣಸಿಹೊಳೆ (ವೀರಘಟ್ಟ) ಗ್ರಾಮದಲ್ಲಿರುವ ಕಣ್ವ ಶಾಖೆಯ ಮೂಲ ಮಹಾ ಸಂಸ್ಥಾನ ಮಠದಲ್ಲಿ ಶ್ರೀಪಾದಂಗಳವರ ವಾಸ್ತವ್ಯವಿದ್ದು ಇದೇ ಮೊದಲ ಬಾರಿಗೆ ಮಹಾ ಮಠಕ್ಕೂ ಭೇಟಿ ನೀಡುವ ಸುಯೋಗವೂ ನನ್ನ ಪಾಲಿಗೆ ಒದಗಿ ಬಂದಿತ್ತು. ಕಲಬುರಗಿಯ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿಯ ಮುಖಂಡರು 2027 ರ ಫೆಬ್ರವರಿ 13, ರಥ ಸಪ್ತಮಿಯಂದು ಕಲಬುರ್ಗಿಯ ಯಾಜ್ಞವಲ್ಕ್ಯ ಭವನದ ಶ್ರೀ ಸೂರ್ಯನಾರಾಯಣ ದೇವರ ಸನ್ನಿಧಿಯಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸುವ ಕಾರ್ಯಕ್ರಮಕ್ಕೆ ಶ್ರೀಗಳವರನ್ನು ವಿಧ್ಯುಕ್ತವಾಗಿ ಆಹ್ವಾನಿಸುವುದಕ್ಕಾಗಿ ಹುಣಸಿಹೊಳೆಗೆ ತೆರಳಲು ನನ್ನನ್ನು ಕೂಡ ಆಹ್ವಾನಿಸಿದ್ದರು. ಇದು ನನ್ನ ಪಾಲಿಗೆ ಬಯಸದೆ ಬಂದ ಭಾಗ್ಯವಾಗಿತ್ತು.
ನಾನು ಬರೆದ “ಯಾಜ್ಞವಲ್ಕ್ಯ ಸ್ಮೃತಿ: ಅಂದು-ಇಂದು-ಎಂದೆಂದೂ” ಕೃತಿಯನ್ನು ಸ್ವಾಮಿಗಳಿಗೆ ಅರ್ಪಿಸಿ ಅವರಿಂದ ಆಶೀರ್ವಾದವನ್ನು ಪಡೆದೆನು. ನನಗೊಂದು ಆಶ್ಚರ್ಯ ಕಾದಿತ್ತು. ಅವರು ನನ್ನನ್ನು, ನನ್ನ ಕೃತಿಯನ್ನು ಗುರುತಿಸಿದರು!
ವರ್ಷ 2024 ರ ಡಿಸೆಂಬರ್ 28 ಹಾಗು 29 ರಂದು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನದ ಒಂದು ಗೋಷ್ಠಿಯಲ್ಲಿ ನಾನು ಮಾತನಾಡಿದ್ದನ್ನು ಜಾÐಪಿಸಿಕೊಂಡರು. ಅಷ್ಟೇ ಅಲ್ಲ, ನಾನು ಅಂದು ಸುಮಾರು ಒಂದು ಗಂಟೆ ಮಾತನಾಡಿದ್ದಾಗಿಯೂ, ಐದು ಸಾವಿರ ವರ್ಷಗಳ ಹಿಂದೆ ಯಾಜ್ಞವಲ್ಕ್ಯರು ಇಂದಿನ ವಿಜ್ಞಾನ ಒಪ್ಪುವ ಭ್ರೂಣ ಶಾಸ್ತ್ರವನ್ನು ‘ಅತ್ಯಂತ ಚೆನ್ನಾಗಿ’ ವಿವರಿಸಿದ್ದನ್ನು ಸ್ಮರಿಸಿಕೊಂಡರು.
ನಂತರ ನಮ್ಮಿಬ್ಬರ ನಡುವೆ ನಡೆದ ಚರ್ಚೆಯಲ್ಲಿ ಅನೇಕ ವಿಷಯಗಳು ಪ್ರಸ್ತಾಪಕ್ಕೆ ಬಂದವು. ಹರಿವಂಶ ಪುರಾಣದಲ್ಲಿ ಕೂಡ ತಾಯಿಯ ಗರ್ಭದಲ್ಲಿ ಭ್ರೂಣ ಹೇಗೆ ಬೆಳೆಯುತ್ತದೆ ಎಂಬ ವಿಷಯ ಇರುವುದನ್ನು ಶ್ರೀಗಳು ನನ್ನ ಗಮನಕ್ಕೆ ತಂದರು.ಗರುಡ ಪುರಾಣದಲ್ಲಿರುವ ತಾಯಿಯ ಗರ್ಭದಲ್ಲಿ ಶಿಶುವಿನ ಬೆಳವಣಿಗೆಯ ಹಂತಗಳನ್ನು ವಿವರಿಸಲಾಗಿದ್ದು ಅದೆಲ್ಲವನ್ನು “ಯಾಜ್ಞವಲ್ಕ್ಯ ಸ್ಮೃತಿ ” ಯಿಂದ ಎರವಲು ಪಡೆದು ಕೊಂಡದ್ದು ಎಂಬ ಭಾರತ ರತ್ನ ಮಹಾಮಹೋಪಾಧ್ಯಾಯ ಪಿ.ವಿ.ಕಾಣೆ ಅವರು ಅಭಿಪ್ರಾಯ ಪಟ್ಟಿರುವುದನ್ನು ಸ್ವಾಮಿಗಳವರ ಗಮನಕ್ಕೆ ತಂದೆನು. ನಮ್ಮ ಚರ್ಚೆ ಸಂಕ್ಷಿಪ್ತವಾಗಿದ್ದರೂ ಉಪಯುಕ್ತವೂ ಅರ್ಥಪೂರ್ಣವೂ ಆಗಿದ್ದುದು ದಿಟ.
ಇಂತಹ ಒಂದು ಅಪರೂಪದ ಅವಕಾಶ ಒದಗಿಸಿ ಕೊಟ್ಡಿದ್ದಕ್ಕಾಗಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಮಿತಿಯ ಮುಖಂಡರಾದ ಶ್ರೀಯುತರಾದ ಶಾಮಾಚಾರ್ಯ ಬೈಚಬಾಳ, ಮಲ್ಹಾರರಾವ್ ಗಾರಂಪಳ್ಳಿ, ವೆಂಕಟೇಶ ಕುಲಕರ್ಣಿ ಮರಟಗೇರಿ, ಭೀಮರಾವ್ ಕುಲಕರ್ಣಿ, ಭೀಮಸೇನ ರಾವ್ ಸಿಂಧಗೇರಿ ಮತ್ತು ದತ್ತಾತ್ರೇಯರಾವ್ ಕುಲಕರ್ಣಿ ಅವರನ್ನೋಳಗೊಂಡ ನಿಯೋಗದೊಂದಿಗೆ (ಹಿರಿಯ ಪತ್ರಕರ್ತ ಮತ್ತು ಸಾಹಿತಿ ಶ್ರೀನಿವಾಸ ಸಿರನೂಕರ್) ನಾನೂ ಇದ್ದೆ.
ವರದಿ: ಶ್ರೀನಿವಾಸ ಸಿರನೂರಕರ್
ಹಿರಿಯ ಪತ್ರಕರ್ತರು ಹಾಗೂ ಸಾಹಿತಿ ಕಲಬುರಗಿ