
ಕಲಬುರಗಿ,ಅ.13-ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶಹಾಬಾದ ರಿಂಗ್ ರೋಡ್ ಕಡೆಯಿಂದ ನಂದೂರ ಕಡೆಗೆ ಹೋಗುವ ರಸ್ತೆ ಮತ್ತು ನಗರದ ಶ್ರೀರಾಮ ಯಾರ್ಡ್ ಹತ್ತಿರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಶಹಾಬಾದ ರಿಂಗ್ ರೋಡ್ ಕಡೆಯಿಂದ ನಂದೂರ ಕಡೆಗೆ ಹೋಗುವ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 50-60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ 5 ಅಡಿ 6 ಇಂಚು ಎತ್ತರವಿದ್ದು, ನೆಹರು ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಬ್ಬಿ ಕಾಲೋನಿಯ ಆನಂದ ವಾಘಮೋರೆ ಎಂಬುವವರು ಈ ಬಗ್ಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚಿತ್ತಾಪುರದಿಂದ ಕಲಬುರಗಿ ಕಡೆಗೆ ಮಗ-ತಾಯಿ ಬೈಕ್ ಮೇಲೆ ಬರುತ್ತಿದ್ದಾಗ ಶ್ರೀರಾಮ ಯಾರ್ಡ್ ಹತ್ತಿರ ಜಂಪ್‍ನಲ್ಲಿ ತಾಯಿ ಬೈಕ್ ಮೇಲಿಂದ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಚಿತ್ತಾಪುರ ಪಾಲಪಗಲ್ಲಿಯ ಶಾಮಬಾಯಿ ನಾಗಣ್ಣ ಯಾದವ್ (59) ಎಂದು ಗುರುತಿಸಲಾಗಿದೆ.
ಇವರ ಪತಿ ನಾಗಣ್ಣ ಯಾದವ್ ಅವರು ನಿವೃತ್ತ ದೈಹಿಕ ಶಿಕ್ಷಕರಾಗಿದ್ದು, ಚಿತ್ತಾಪುರದಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಅ.11ರಂದು ಶಾಮಬಾಯಿ ಮತ್ತು ಅವರ ಮಗ ವೆಂಕಟೇಶ್ವರ ಅವರು ಮನೆಗೆ ಹಾಕುವ ಗ್ರೈನೆಟ್ ಮತ್ತು ಟೈಲ್ಸ್ ನೋಡಿ ಬರಲು ಬೈಕ್ ಮೇಲೆ ಕಲಬುರಗಿ ಕಡೆಗೆ ಬರುತ್ತಿದ್ದರು. ಶ್ರೀರಾಮ ಯಾರ್ಡ್ ಹತ್ತಿರ ಜಂಪ್‍ನಲ್ಲಿ ಶಾಮಬಾಯಿ ಅವರು ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























