
ಮೈಸೂರು: ಕಾವ್ಯ ರಚನೆ ಎನ್ನುವುದು ನಿರಂತರವಾಗಿ ಹರಿಯುವ ಭಾವನೆಗಳ ಅಭಿವ್ಯಕ್ತಿಯಾಗಿದೆ. ಪ್ರತಿಯೊಬ್ಬರ ತೃಪ್ತಿಗೆ ತಕ್ಕಂತೆ ಅವರವರ ಕಾವ್ಯವಿರುತ್ತದೆ ಮತ್ತು ಅವರವರ ಅಗತ್ಯಕ್ಕೆ ತಕ್ಕಂತೆ ಅವರ ಗ್ರಹಿಕೆ ಇರುತ್ತದೆ ಎಂದು ಪ್ರಖ್ಯಾತ ಸಾಹಿತಿ ವೈದೇಹಿ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಇಂದು ಆಯೋಜಿಸಿದ್ದ ಬಹುರೂಪಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ ಸಮಾಜವನ್ನು ಮಂಥನ ಮಾಡುವ ಶಕ್ತಿ ಹೊಂದಿದೆ. ಜಗತ್ತಿನ ಮೊದಲ ಕವಿ ತಾಯಿಯೇ ಆಗಿದ್ದು, ತಾಯಿ ಎಂಬ ಕವಿ ಜೋಗುಳದ ಮೂಲಕ ಭಕ್ತಿಯನ್ನು ಬೆರೆಸಿದಳು ಎಂದು ಅವರು ಹೇಳಿದರು.
ಕಾವ್ಯಕ್ಕೆ ಬೇಕಾದ ವಿಶೇಷ ಗುಣ ನೋಟದ ಭಾವನೆ. ಮನಸ್ಸಿನ ಪ್ರೇಕ್ಷಕತ್ವದಲ್ಲಿ ಭಾವನೆಗಳು ಘನೀಕೃತಗೊಳ್ಳುತ್ತವೆ. ಕಾವ್ಯಕ್ಕೆ ದೊಡ್ಡ ದೊಡ್ಡ ಪದಗಳ ಅಗತ್ಯವಿಲ್ಲ. ಸರಳ ಶಬ್ದಗಳಲ್ಲೇ ಗಹನವಾದುದನ್ನು ಹೇಳಲು ಸಾಧ್ಯ ಎಂಬುದನ್ನು ಅರಿಯುವುದೇ ಆತ್ಮವಿಶ್ವಾಸದ ಲಕ್ಷಣ ಎಂದು ವೈದೇಹಿ ತಿಳಿಸಿದರು.
ಪ್ರತಿಭೆ ಮತ್ತು ಪರಿಶ್ರಮ ಎರಡೂ ಮುಖ್ಯ, ಆದರೆ ಒಳಗೆ ಅನುಭವದ ದ್ರವ್ಯವಿರಬೇಕು. ಅನುಭವವಿಲ್ಲದೆ ಯಾವುದೇ ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ. ಕಾವ್ಯ ಸೃಷ್ಟಿಗೆ ಪರಿಶ್ರಮ ಮತ್ತು ಒಡನಾಟ ಅತ್ಯವಶ್ಯಕ ಎಂದರು.
ನಾವು ಅನೇಕ ಬಾರಿ ನಮ್ಮ ಭಾವನೆಗಳನ್ನೇ ಭಾರ ಮಾಡಿಕೊಳ್ಳುತ್ತೇವೆ. ಸಿಟ್ಟು, ಸೆಡವು, ದ್ವೇಷಗಳಿಂದ ಸಮಾಜದಿಂದ ದೂರವಾಗುತ್ತೇವೆ. ಕಾವ್ಯದ ಮೂಲಕ ಎಲ್ಲ ಅತಿಗಳನ್ನು ಕರಗಿಸಿ ಸಂಬಂಧಗಳ ನೆಲೆಗೆ ಬರುವುದು ಮುಖ್ಯ ಎಂದು ಹೇಳಿದರು.
ಕನ್ನಡ ನಾಡಿನಲ್ಲಿ ಕನ್ನಡವನ್ನು ಮರೆತು ಇಂಗ್ಲಿಷ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದು ನಮ್ಮತನದ ಮೇಲಿನ ಮೋಹವನ್ನು ಕಡಿಮೆ ಮಾಡುತ್ತಿದೆ. ಪಂಪ, ಕುಮಾರವ್ಯಾಸ, ಬಸವಣ್ಣನವರ ನಾಡಿನಲ್ಲಿ ಕನ್ನಡದ ಅಸ್ಮಿತೆ ಉಳಿಸುವ ಕೆಲಸವಾಗಬೇಕು ಎಂದರು.
ಕನ್ನಡ ಕಾವ್ಯ ತನ್ನದೇ ಆದ ಸಹಜ ಸೌಂದರ್ಯ ಮತ್ತು ಭಾವಲೋಕವನ್ನು ಹೊಂದಿದೆ. ಅದಕ್ಕೆ ಕೃತಕ ಬುದ್ಧಿಮತ್ತೆಯ ಸ್ಪರ್ಶವಾಗಬಾರದು. ಕನ್ನಡ ಕಾವ್ಯ ಎಐಗೆ ಬಲಿಯಾಗಬಾರದು. ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಕೆಲಸವಾಗಬೇಕು. ಕವಿತೆ ಬರೆಯುವುದು ಹೃದಯದ ಮಾತು. ಕವಿ ಹೃದಯ ನೀಡುವ ಕಾರುಣ್ಯ ಭಾವನೆಯಿಂದ ಲೋಕವನ್ನು ನೋಡುವ ಶಕ್ತಿ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ತಾವು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಟು ವರ್ಷ ವಿದ್ಯಾಭ್ಯಾಸ ಮಾಡಿದ್ದು, ತಂದೆಯವರ ಸಹಕಾರ ಮತ್ತು ಗ್ರಂಥಾಲಯದ ಒಡನಾಟದಿಂದ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯಿತು. ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸಾಹಿತಿಗಳು, ವಿಜ್ಞಾನಿಗಳು, ಇತಿಹಾಸಕಾರರನ್ನು ಒಳಗೊಂಡ ಒಂದು ವಿಶ್ವವಾಗಿದೆ. ಕುವೆಂಪು ಅವರ ಕರ್ಮಭೂಮಿಯಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಪುಣ್ಯ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಮಾತನಾಡಿ, ನಾವು ದಿನನಿತ್ಯ ಬಳಸುವ ಭಾಷೆ ಬಹಳ ಮುಖ್ಯ. ನಮ್ಮ ಭಾಷೆಯಲ್ಲಿ ಅಸ್ಮಿತೆ ಇದೆ. ತಂತ್ರಜ್ಞಾನ ಬೆಳೆದಂತೆ ಜೀವನ ಸುಲಭವಾಗುತ್ತದೆ, ಆದರೆ ಜೀವನದ ಮೌಲ್ಯ ಹೆಚ್ಚಾಗಲು ಸಾಹಿತ್ಯ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ನಂಜಪ್ಪ ಹೊಂಗನೂರು, ದಸರಾ ಕವಿಗೋಷ್ಠಿ ವಿಶೇಷಾಧಿಕಾರಿ ಎಂ. ದಾಸೇಗೌಡ, ಮಹಾದೇವ, ಎಂ.ಕೆ. ಲೋಕಲಾಕ್ಷಿ, ಎಸ್.ಡಿ. ಶಶಿಕಲಾ, ಡಾ. ತ್ರಿವೇಣಿ, ಡಾ. ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.























