Home ಮುಖಪುಟ ಸುದ್ದಿ ದಸರಾ ಕ್ರೀಡಾಕೂಟ ನಾಡಿನ ಹೆಮ್ಮೆ: ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ

ದಸರಾ ಕ್ರೀಡಾಕೂಟ ನಾಡಿನ ಹೆಮ್ಮೆ: ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ

ಮೈಸೂರು: ನಾಡಹಬ್ಬ ದಸರಾ ನಿಮಿತ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿರುವ ಸಿ.ಎಂ. ಕಪ್ ಮೈಸೂರು ದಸರಾ ಕ್ರೀಡಾಕೂಟದಲ್ಲಿ ರಾಜ್ಯದ 4500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡು ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಈ ವರ್ಷದ ದಸರಾ ಉದ್ಘಾಟಕರಾದ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಇಂದು ನಗರದ ಚಾಮುಂಡಿ ವಿಹಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ವಿವಿಧ ಕ್ರೀಡಾಕೂಟಗಳನ್ನು ವೀಕ್ಷಿಸಿ ಮಾತನಾಡಿದರು.

ಮೊದಲಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಕಲಬುರಗಿ ವಿಭಾಗಗಳ ನಡುವೆ ನಡೆದ ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸಿದ ಶ್ರೀಗಳು, ನಂತರ ಅಥ್ಲೆಟಿಕ್ ಸಿಂಥೆಟಿಕ್ ಅಂಕಣಕ್ಕೆ ತೆರಳಿ ಮಹಿಳೆಯರು ಮತ್ತು ಪುರುಷರ 400×4 ರಿಲೇ ಓಟವನ್ನು ವೀಕ್ಷಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಬಳಿಕ ಕ್ರೀಡಾಂಗಣ ಆವರಣದ ಕುಸ್ತಿ ಮನೆಗೆ ಭೇಟಿ ನೀಡಿ ದೇಸಿ ಆಟವಾದ ಮಕ್ಕಳ ಕುಸ್ತಿ ಪಂದ್ಯ ನೋಡಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗದಗಿನ ಚಿಕ್ಕೇನಕೊಪ್ಪ ಮಠದ ಶಿವಶಾಂತವೀರ ಶ್ರೀಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ದಸರಾ ಕ್ರೀಡಾ ಉಪಸಮಿತಿ ಕಾರ್ಯಾಧ್ಯಕ್ಷ ಡಾ. ಜಿತೇಂದ್ರ ಶೆಟ್ಟಿ, ಜಂಟಿ ನಿರ್ದೇಶಕ ಸುಭಾಷ್ ಚಂದ್ರ, ಉಪ ನಿರ್ದೇಶಕ ಎಂ.ಸಿ. ರಮೇಶ್, ಸಹಾಯಕ ನಿರ್ದೇಶಕರಾದ ಮಂಜುನಾಥಸ್ವಾಮಿ, ಡಾ. ಶರಣು ಗೋಗೇರಿ, ವಿಠ್ಠಲ್ ಜಾಬಗೌಡರ್, ಇರೇಶ್ ನಾಯಕ್, ತರಬೇತುದಾರರಾದ ವಿಜಯಕೃಷ್ಣ, ವಿನೋದ್ ಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ತರಬೇತುದಾರರು ಮತ್ತು ಸಾವಿರಾರು ಕ್ರೀಡಾಪಟುಗಳು ಉಪಸ್ಥಿತರಿದ್ದರು.