
ಕಲಬುರಗಿ,ಜು.24-ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 2 ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಮನೆಗಳ್ಳನನ್ನು ಬಂಧಿಸಿ 20 ಲಕ್ಷ ರೂ.ಮೌಲ್ಯದ 117 ಗ್ರಾಂ.ಬಂಗಾರದ ಆಭರಣವನ್ನು ಜಪ್ತಿ ಮಾಡುವಲ್ಲಿ ಅಶೋಕ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ ಪತ್ತೆಗೆ ಡಿಸಿಪಿಗಳಾದ ಶಾಲೂ, ಪ್ರವೀಣ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಲಬುರಗಿ ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ, ಅಶೋಕನಗರ ಪೊಲೀಸ್ ಠಾಣೆ ಪಿಐ ಸತೀಶ ಕಣಿಮೇಶ್ವರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವೈಜಿನಾಥ, ಮಲ್ಲಿಕಾರ್ಜುನ ಮೇತ್ರೆಮ ಶಿವಪ್ರಕಾಶ, ಮುಜಾಹಿದ್, ಕರಣ್, ನೀಲಕಂಠರಾಯ ಪಾಟೀಲ, ಚಂದ್ರಶೇಖರ್, ಹರಿಕಿಶೋರ, ಶ್ರೀಕಾಂತ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪ್ರಭಾಕರ, ಶಿವಲಿಂಗ, ಸಿಡಿಆರ್ ಸೆಲ್‍ನ ಚನ್ನವೀರೇಶ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ತೆಲಂಗಾಣ ರಾಜ್ಯದ ವರಂಗಲ್‍ನ ಸೈಯದ್ ಹಮೀದ್ ತಂದೆ ಸೈಯದ್ ಮೆಹಬೂಬ್ ಅಲಿ (46) ಎಂಬಾತನನ್ನು ಬಂಧಿಸಿ 20 ಲಕ್ಷ ರೂ.ಮೌಲ್ಯದ 117 ಗ್ರಾಂ.ಬಂಗಾರದ ಆಭರಣಗಳನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.
ಎರಡು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.































