
ಕಲಬುರಗಿ,ಜು.24-ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲಾ ಪೊಲೀಸ್ ಸಂಯುಕ್ತಾಶ್ರಯದಲ್ಲಿ ನಗರದ ನೌಕರರ ರಾಜ್ಯ ವಿಮಾ ನಿಗಮ (ಇಎಸ್‍ಐಸಿ) ಆಸ್ಪತ್ರೆಯಲ್ಲಿ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎಂ.ಡಿ.ಇರ್ಫಾನ್ ಮಹಾಗಾವಿ ಅವರು ವಿದ್ಯಾರ್ಥಿಗಳಿಗೆ ವಿವಿಧ ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಿ, ಮಾದಕ ವಸ್ತುಗಳು ನಮ್ಮ ದೇಹದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ದುಶ್ಚಟಗಳಿಂದ ಹೇಗೆ ದೂರವಿರಬೇಕು ಮತ್ತು ಮಾದಕ ವ್ಯಸನದಿಂದ ದೂರಾವಾಗಲು ವಹಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ನಗರದ ವಿವಿಧ ಶಾಲಾ-ಕಾಲೇಜುಗಳಿಂದ ಸುಮಾರು 2,000 ವಿದ್ಯಾರ್ಥಿಗಳು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾದಕ ದ್ರವ್ಯಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ 96 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು.
ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹಣೆ, ಸೇವನೆ ಮಾಡುವವರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾರಣ ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಯಾವುದೇ ರೀತಿಯ ಮಾರಕ ದ್ರವ್ಯದ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಲಾಯಿತು.
ಸನ್ಮಿತ್ರ ಯೋಜನೆಯಡಿಯಲ್ಲಿ ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯದ ವ್ಯಸನಕ್ಕೊಳಗಾದ ವ್ಯಕ್ತಿಯ ಪುನ: ಪರಿರ್ವತನೆ ಮಾಡುವ ಸಲುವಾಗಿ ಹಾಗೂ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗೆ ಸಹಕರಿಸಲು ಮತ್ತು ಮಾದಕ ವ್ಯಸನದ ಚಟದಿಂದ ಮುಕ್ತಗೊಳ್ಳುವವರೆಗೆ ಅವನ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಯೋಜಿಸಲಾಗಿರುತ್ತದೆ. ಕಲಬುರಗಿ ಮತ್ತು ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹಣೆ, ಸೇವನೆ ಮಾಡುವವರ ಕುರಿತು ಮಾಹಿತಿ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 112 ಹಾಗೂ 1908 ಮತ್ತು ಕೆಪಿಎಸ್ ಆ್ಯಪ್ ಮೂಲಕ ಮಾಹಿತ ನೀಡುವಂತೆ ಕೋರಲಾಯಿತು ಮತ್ತು ಮಾಹಿದಾರರ ಕುರಿತು ಮಾಹಿತಿ ಗೌಪ್ಯವಾಗಿರಿಸುವ ಬಗ್ಗೆ ಭರವಸೆ ನೀಡಲಾಯಿತು.
ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಮಹೇಶ್ ಮೇಘಣ್ಣನವರ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಶಾಲೂ, ಪ್ರವೀಣ್ ನಾಯಕ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಮತ್ತು ಇಎಸ್‍ಐಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.































