
ಬೀದರ್: ಸಿಎಂ ಡಿ.ಕೆ ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಇತ್ತಿಚೀಗೆ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿದ ಹಿನ್ನೆಲೆ ರಾಜ್ಯದ ಗಡಿ ಜಿಲ್ಲೆ ಬೀದರ್ನಲ್ಲಿ ಸಕಲ ಮರಾಠಾ ಸಮಾಜ ವತಿಯಿಂದ ವಿಜಯೋತ್ಸವ ಜರುಗಿತು.
ಬುಧವಾರ ನಗರದ ಶಿವಾಜಿ ಚೌಕ್ನಲ್ಲಿ ಸಮಾಜದ ಮುಖಂಡರು ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪೂಜ್ಯರಾದ ದಾದಾ ಮಹಾರಾಜ ನಗರಕರ್ ಮಾತನಾಡಿ, ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಸಮಾಜದಲ್ಲಿ ಒಂದೊAದು ಕರ್ಮವನ್ನು ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ಅಧಿಕಾರವನ್ನು ಜನಸೇವೆಯ ಅವಕಾಶವನ್ನಾಗಿ ಪರಿಗಣಿಸಿ, ತಳಮಟ್ಟದ ಸ್ಥಳೀಯ ಸಂಸ್ಥೆಯಿAದ ರಾಜಕೀಯ ಜೀವನ ಆರಂಭಿಸಿ ರಾಜ್ಯ ಸಚಿವ ಸ್ಥಾನದ ವರೆಗೆ ಬೆಳೆದಿರುವ ಸಂತೋಷ್ ಲಾಡ್ ಅವರ ರಾಜಕೀಯ ಪಯಣ ಗಮನಾರ್ಹವಾಗಿದೆ ಎಂದರು.
ಪತ್ರಕರ್ತ ಪ್ರದೀಪ ಬಿರಾದಾರ ಮಾತನಾಡಿ, ೨೦೦೪ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರವನ್ನು ತಮ್ಮ ರಾಜಕೀಯ ಕರ್ಮ ಭೂಮಿಯನ್ನಾಗಿಸಿಕೊಂಡ ಅವರು ಕಾಂಗ್ರೆಸ್ ಪಕ್ಷದಿಂದ ೨೦೦೮, ೨೦೧೩ ಹಾಗೂ ೨೦೨೩ರ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಒಟ್ಟು ನಾಲ್ಕು ಬಾರಿ ಶಾಸಕರಾಗಿ, ಮಾತ್ರವಲ್ಲದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಸಂತೋಷ್ ಲಾಡ್ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ವಾರ್ತಾ ಮತ್ತು ಪ್ರಸಾರ ಇಲಾಖೆ ಸೇರಿದಂತೆ ಕಾರ್ಮಿಕ ಇಲಾಖೆಯ ಹೊಣೆಯನ್ನು ವಿವಿಧ ಅವಧಿಗಳಲ್ಲಿ ನಿರ್ವಹಿಸಿರುವ ಅವರು, ಸಚಿವರಾಗಿ ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಅಧಿಕಾರವು ಜನಸೇವೆಗೆ ದೊರೆತ ಅವಕಾಶ ಎಂಬ ಮನೋಭಾವದೊಂದಿಗೆ ಸಾರ್ವಜನಿಕ ಜೀವನದಲ್ಲಿ ಮತ್ತಷ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಭಗವಂತನು ಅವರಿಗೆ ಸದ್ಬುದ್ಧಿ ಮತ್ತು ಶಕ್ತಿಯನ್ನು ಕರುಣಿಸಲಿ ಎಂಬುದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳ ಆಶಯವಾಗಿದೆ ಎಂದರು.
ಸಮಾಜದ ಮುಖಂಡರಾದ ಸತೀಶ ಮುಳೆ ಮಾತನಾಡಿ, ೧೯೭೫ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಶಿವಾಜಿ ಹಾಗೂ ಶೈಲಜಾ ದಂಪತಿಯ ಪುತ್ರರಾಗಿ ಜನಿಸಿದ ಸಂತೋಷ್ ಲಾಡ್ ಅವರು ಬಿ.ಕಾಂ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಅವರು ನಂತರ ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಪಟ್ಟಣ ಪಂಚಾಯಿತಿಯಿAದ ರಾಜಕೀಯ ಪಯಣ ಆರಂಭಿಸಿರುವ ಅವರು, ೨೦೦೨ರಲ್ಲಿ ಸಂಡೂರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಂತೋಷ್ ಲಾಡ್ ಅವರು ತಮ್ಮ ರಾಜಕೀಯ ಜೀವನಕ್ಕೆ ಚಾಲನೆ ನೀಡಿದರು. ಸ್ಥಳೀಯ ಸಂಸ್ಥೆಯ ಸದಸ್ಯರಾಗಿ ಆರಂಭವಾದ ಅವರ ರಾಜಕೀಯ ಪಯಣ ಕ್ರಮೇಣ ವಿಧಾನಸಭೆಯ ವರೆಗೆ ವಿಸ್ತರಿಸಿತು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಕಿಶನರಾವ ಪಾಟೀಲ ಇಂಚುರಕರ್, ಸಮಾಜದ ಮುಖಂಡರಾದ ಅಮರ ಜಾಧವ, ಸುರೇಶ ಟಾಕಳೆ, ವಿದ್ಯಾವಾನ ಪಾಟೀಲ, ಸಂದೀಪ ಪಾಟೀಲ, ಡಿಸೊಜಾ, ಸತ್ಯದೀಪ ಬಿರಾದಾರ, ಮಿನಾಕ್ಷಿ ಕಾಳೆ ಪಾಟೀಲ, ಅನಿತಾ ಭೋಸ್ಲೆ, ಮೀರಾತಾಯಿ ಮುಳೆ, ಉಷಾ ಸೂರ್ಯವಂಶಿ, ಸುರೇಶ ಹಲವಾಯಿ, ಅಶೋಕ ಪಾಟೀಲ, ಶಿವಾಜಿ ಪಾಟೀಲ, ರಾಜೇಶ್ವರಿ ಹಾಗೂ ಇತರರು ಇದ್ದರು.































