Home Lead News ಮಂತ್ರಿ ಪಟ್ಟಕ್ಕಾಗಿ ಲಾಬಿ

ಮಂತ್ರಿ ಪಟ್ಟಕ್ಕಾಗಿ ಲಾಬಿ

ಬೆಂಗಳೂರು,ಜು.೪:ಆಷಾಢಮಾಸ ಆರಂಭಕ್ಕೂ ಮುನ್ನ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದು ಪಕ್ಕಾ ಆಗುತ್ತಿದ್ದಂತೆಯೇ ಸಚಿವಾಕಾಂಕ್ಷಿ ಶಾಸಕರುಗಳು ದೆಹಲಿಯಲ್ಲಿ ಮೊಕ್ಕಂ ಹೂಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದು, ಹೈಕಮಾಂಡ್ ಮಟ್ಟದಲ್ಲೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ, ಸಮಾಲೋಚನೆಗಳು ನಡೆದಿವೆ.


ಈ ತಿಂಗಳ ೧೫ ರಿಂದ ಆಷಾಢಮಾಸ ಆರಂಭವಾಗಲಿದ್ದು, ಸಂಪುಟ ವಿಸ್ತರಣೆ ಈ ತಿಂಗಳ ೧೧ ಇಲ್ಲವೆ ೧೨ ರಂದು ಆಗುವುದು ಪಕ್ಕಾ ಆಗಿದೆ. ಹಾಗಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳು ಕಳೆದ ೨ ದಿನಗಳಿಂದಲೇ ದೆಹಲಿಯಲ್ಲಿ ಬೀಡು ಬಿಟ್ಟು, ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ.


ದೆಹಲಿಯಲ್ಲಿರುವ ಸಚಿವಾಕಾಂಕ್ಷಿ ಶಾಸಕರುಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹೈಕಮಾಂಡ್ ಮಟ್ಟದ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.


ಕಾಂಗ್ರೆಸ್‌ನಿಂದ ೩-೪ ಬಾರಿ ಗೆದ್ದಿರುವ ಶಾಸಕರುಗಳು ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆಸಿದ್ದು, ಮುಂದಿನ ವಿಧಾನಸಭಾ ಚುನಾವಣೆಗೂ ಮನ್ನ ಮತ್ತೆ ಸಂಪುಟ ವಿಸ್ತರಣೆಯಾಗುವ ಸಾಧ್ಯತ ಕಡಿಮೆ ಇರುವುದರಿಂದ ಸಚಿವರಾಗಲು ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿಯೇ ಇದ್ದು, ವರಿಷ್ಠರಿಗೆ ಯಾರನ್ನು ಸಚಿವರನ್ನಾಗಿಸಬೇಕು ಎಂಬುದು ತಲೆ ನೋವಾಗಿದೆ.


ಪ್ರಾದೇಶಿಕತೆ ಜಾತಿವಾರು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಆಂತಿಮಗೊಳಿಸಲಿದೆ.


ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಇವರುಗಳೆಲ್ಲಾ ೨-೩ ಸುತ್ತಿನ ಚರ್ಚೆಗಳನ್ನು ನಡೆಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸದಿಂದ ವಾಪಸ್ಸಾದ ಬಳಿಕ ಅವರ ಜತೆ ಅಂತಿಮವಾಗಿ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವರು.


ಕಳೆದ ಜೂನ್ ೩ ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ೧೩ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಸಚಿವ ಸಂಪುಟದಲ್ಲಿ ಇನ್ನೂ ೨೦ ಸ್ಥಾನಗಳು ಖಾಲಿ ಇವೆ. ಈ ೨೦ ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ೪೦ ಕ್ಕೂ ಹೆಚ್ಚು ಶಾಸಕರು ಲಾಬಿ ನಡೆಸಿದ್ದು, ಯಾರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸದ್ಯದ ಮಟ್ಟಿಗೆ ಕಗ್ಗಂಟಾಗಿದೆ.


ವಿಧಾನಸಭೆಗೆ ೪-೫ ಬಾರಿ ಗೆದ್ದಿರುವ ಶಾಸಕರುಗಳು ತಮಗೆ ಸಚಿವ ಸ್ಥಾನ ನೀಡಲೆಬೇಕು ಎಂದು ಪಟ್ಟು ಹಿಡಿದಿದ್ದು, ಹೊಸ ಮುಖಗಳಿಗೆ ಅದರಲ್ಲೂ ಯುವಕರಿಗೆ ಆದ್ಯತೆ ನೀಡಿ ಎಂದು ರಾಹುಲ್‌ಗಾಂಧಿ ಸೂಚನೆ ನೀಡಿರುವುದು ಸಚಿವರ ಪಟ್ಟಿ ತಯಾರಿಕೆ ಕಗ್ಗಂಟಾಗಿದೆ.


ಸಚಿವ ಸಂಪುಟದಲ್ಲಿ ಖಾಲಿ ಉಳಿದಿರುವ ೨೦ ಸ್ಥಾನಗಳ ಪೈಕಿ ಐದಾರು ಸ್ಥಾನಗಳಿಗೆ ೨ ಬಾರಿ ಗೆದ್ದಿರುವ ಶಾಸಕರನ್ನು ನೇಮಕ ಮಾಡಿ ಉಳಿದಂತೆ ಹಿರಿತನ, ಜಾತಿ, ಪ್ರಾದೇಶಿಕವಾರು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದೆ.


ಈ ತಿಂಗಳ ೧೫ ರಿಂದ ಆಷಾಢಮಾಸ ಆರಂಭವಾಗುತ್ತಿದ್ದು, ೧೩ ರಂದು ಅಮವಾಸೆ ಇದೆ ಹಾಗಾಗಿ ಅಮವಾಸ್ಯೆಗೂ ಮುನ್ನ ಜು. ೧೧ ಇಲ್ಲವೆ ೧೨ ರಂದು ನೂತನ ಸಚಿವರ ಪ್ರಮಾಣ ವಚನ ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ಸಂಪುಟ ವಿಸ್ತರಣೆ ಜು. ೮ ರಂದು ಡಿಕೆ, ಸಿದ್ಧು ದೆಹಲಿಗೆ


ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಈ ತಿಂಗಳ ೮ ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರುಗಳು ದೆಹಲಿಗೆ ತೆರಳಲಿದ್ದಾರೆ.


ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಬೇಕಾಗಿತ್ತಾದರೂ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸದಿಂದ ಬರುವುದು ಮೂರು ದಿನ ತಡವಾಗಿದ್ದು, ಜು. ೮ ರಂದು ರಾಹುಲ್‌ಗಾಂಧಿ ವಿದೇಶದಿಂದ ವಾಪಸ್ಸಾಗುವರು. ಹಾಗಾಗಿ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಇವರಿಬ್ಬರೂ ನಾಳೆ ಬದಲು ಜು. ೮ ರಂದು ದೆಹಲಿಗೆ ತೆರಲಿ ೨ ದಿನಗಳ ಕಾಲ ಅಲ್ಲಿಯೇ ಮೊಕ್ಕಾಂ ಹೂಡಿ ರಾಹುಲ್‌ಗಾಂಧಿ ಅವರ ಜತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ೨-೩ ಬಾರಿ ಚರ್ಚೆ ನಡೆಸಿದ್ದು, ಅಂತಿಮವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳ ಜತೆಯೂ ಚರ್ಚಿಸಿ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿ ಈ ಪಟ್ಟಿಗೆ ರಾಹುಲ್‌ಗಾಂಧಿ ಅವರ ಒಪ್ಪಿಗೆ ಪಡೆಯುವರು ಎಂದು ಹೇಳಲಾಗಿದೆ.


ಜು. ೮ ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ತಮ್ಮ ಬೆಂಬಲಕ್ಕಿರುವ ಶಾಸಕರಲ್ಲಿ ಯಾರನ್ನು ಸಚಿವರನ್ನಾಗಿಸಬೇಕು ಎಂದು ತನ್ನದೇ ಆದ ಪಟ್ಟಿಯನ್ನು ದೆಹಲಿಗೆ ಕೊಂಡೊಯ್ಯಲಿದ್ದು, ಈ ಪಟ್ಟಿಯನ್ನು ಹೈಕಮಾಂಡ್ ಮುಂದಿಟ್ಟು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಸರ್ವ ಪ್ರಯತ್ನ ನಡೆಸುವರು.


ಕಾಂಗ್ರೆಸ್‌ನಲ್ಲಿ ಈಗಿರುವ ಬೆಳವಣಿಗೆಗಳನ್ನು ಗಮನಿಸಿದರೆ ಆಷಾಢಮಾಸದ ಒಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತ.