Home Lead News ಬಂಡೆ ಬಿದ್ದು ೭ ಸಾವು

ಬಂಡೆ ಬಿದ್ದು ೭ ಸಾವು

ಮೂವರ ಸ್ಥಿತಿ ಗಂಭೀರ

ಬೆಂಗಳೂರು,ಜು.೨-ನಗರದ ಹೊರವಲಯದ ತಾವರೆಕರೆಯ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯಲ್ಲಿ ಭೀಕರ ದುರಂತ ಸಂಭವಿಸಿ ಕೆಲಸ ಮಾಡುತ್ತಿದ್ದಾಗ ಹಠಾತ್ ಬಂಡೆ ಕುಸಿದು ೭ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.


ದುರಂತದಲ್ಲಿ ಬಂಡೆ ಕೆಳಗೆ ಸಿಲುಕಿ ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರು ಸ್ಥಿತಿ ಗಂಭೀರವಾಗಿದೆ.
ಅವಘಡದಲ್ಲಿ ಮೃತಪಟ್ಟವರನ್ನು ರಾಮು (೪೬), ರಾಜಪಾಲ್ ಸಿಂಗ್ (೩೫), ಸತ್ಯನಾರಾಯಣ ಸಿಂಗ್ (೩೧), ರಾಮ ವತಾರ್ ಸಿಂಗ್ (೩೧), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಎಂದು ಗುರುತಿಸಲಾಗಿದೆ.


ದುರಂತದಲ್ಲಿ ಉತ್ತರ ಭಾರತದ ನಾಲ್ವರು, ಕರ್ನಾಟಕದ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಾದ ಗುಲಾಬ್ ಸಿಂಗ್ (೨೭), ರಾಜ್ ಪಾಲ್ (೩೦), ಚೋಟು (೨೪), ನೋಹರ್ ಸಿಂಗ್ (೨೧), ಆನಂದ್ (೩೦) ಅವರನ್ನು ಮೈಸೂರು ರಸ್ತೆಯಲ್ಲಿರುವ ಆರ್.ಆರ್.ಆಸ್ಪತ್ರೆಗೆ ದಾಖಲಸಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಈ ಪೈಕಿ ಓರ್ವ ಕೂಲಿ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬಂಡೆ ಬಿದ್ದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದರೆ, ಮೂರು ಟ್ಯಾಕ್ಟರ್‌ಗಳು ಸಂಪೂರ್ಣ ಜಖಂಗೊಂಡಿವೆ.


ಮಾದಪಟ್ಟಣದಲ್ಲಿನ ಕಾವೇರಿ ಕಂಪನಿಗೆ ಸೇರಿದ ಕ್ರಷರ್‌ನಲ್ಲಿ ಬೆಳಿಗ್ಗೆ ೭:೩೦ರ
ಕಲ್ಲು ಕ್ವಾರಿಯ ಮೇಲ್ಬಾಗದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಭಾರೀ ಗಾತ್ರದ ಬಂಡೆಯೊಂದನ್ನು ಜರುಗಿಸುವ (ಸರಿಸುವ) ಕೆಲಸದಲ್ಲಿ ೧೬ ಮಂದಿ ಕಾರ್ಮಿಕರು ತೊಡಗಿದ್ದರು.
ದುರದೃಷ್ಟವಶಾತ್, ಈ ವೇಳೆ ನಿಯಂತ್ರಣ ತಪ್ಪಿದ ಬಂಡೆಯು ನೇರವಾಗಿ ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆ ಬಿದ್ದ ತೀವ್ರತೆಗೆ ಸಿಲುಕಿದ ಒಂಬತ್ತು ಜನ ಕಾರ್ಮಿಕರು ಕ್ಷಣಮಾತ್ರದಲ್ಲಿ ಜೀವಬಿಟ್ಟಿದ್ದಾರೆ.


ಮೃತರನ್ನು ಬಿಹಾರ ಮತ್ತು ಅಸ್ಸಾಂ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕಾವೇರಿ ಕ್ರಷರ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು.


ದುರಂತ ಸಂಭವಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಚೀರಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಮತ್ತು ಇತರ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಬಂಡೆಯಡಿ ಸಿಲುಕಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನುಳಿದ ಮೃತದೇಹಗಳನ್ನು ಹೊರತೆಗೆದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


೧೬ ಕಾರ್ಮಿಕರು ಕೆಲಸ:


ಘಟನಾ ಸ್ಥಳಕ್ಕೆ ಭೇಟಿ ಬಳಿಕ ಮಾತನಾಡಿರುವ ಕೇಂದ್ರ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕ( ಡಿಐಜಿಪಿ) ಎಸ್.ಗಿರೀಶ್, ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆಯಿದ್ದ ಕ್ವಾರಿಯಲ್ಲಿ ೧೬ ಕಾರ್ಮಿಕರು ಕೆಲಸ ಮಾಡ್ತಿದ್ದರು. ಬಂಡೆ ಬಿದ್ದು ೧೬ ಕಾರ್ಮಿಕರ ಪೈಕಿ ೭ ಮಂದಿ ಮೃತಪಟ್ಟಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಗುತ್ತಿಗೆದಾರ (ಮೇಸ್ತ್ರಿ) ಮತ್ತು ಕ್ರಷರ್ ಮಾಲೀಕರನ್ನು ಸ್ಥಳಕ್ಕೆ ಕರೆಸಿ, ತನಿಖೆಯನ್ನು ಚುರುಕುಗೊಳಿಸಲಾಗಿದೆ.


ಅಂದು ಚಿರತೆ ಬಲಿ:


ಹಿಂದೆ ಇದೇ ಹುಲವೇನಹಳ್ಳಿ ಮತ್ತು ಮಾದಾಪಟ್ಟಣ ಭಾಗದ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ಬಂಡೆ ಸ್ಫೋಟಿಸಿದಾಗ ಕಲ್ಲು ಸಿಡಿದು ಚಿರತೆಯೊಂದು ಸಾವನ್ನಪ್ಪಿತ್ತು. ಆಗಲೇ ಈ ಭಾಗದ ಕ್ವಾರಿಗಳ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಿಂದಾಗಿ ಇಂದು ಚಿರತೆಯ ಬೆನ್ನಲ್ಲೇ ಒಂಬತ್ತು ಮಂದಿ ಅಮಾಯಕರು ಬಲಿಯಾಗಿದ್ದಾರೆ.


ಸಂಪೂರ್ಣ ಉಲ್ಲಂಘನೆ:


ಕ್ವಾರಿಯ ಮೇಲ್ಬಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಟ್ರ್ಯಾಕ್ಟರ್ ಬಳಸಿ ಬಂಡೆ ಜರುಗಿಸುವಾಗ ಕೆಳಗೆ ಕಾರ್ಮಿಕರು ಕೆಲಸ ಮಾಡಲು ಹೇಗೆ ಬಿಡಲಾಯಿತು? ಯಾವುದೇ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೆ ಎನ್ನುವುದರ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ.

ವರದಿ ಬಂದ ಬಳಿಕ ಕಠಿಣ ಕ್ರಮ: ಡಿಕೆಶಿ


ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಪಟ್ಟಣದ ಕಲ್ಲುಕ್ವಾರಿಯಲ್ಲಿ ನಡೆದಿರುವ ದುರಂತದ ಬಗ್ಗೆ ಅಧಿಕೃತ ವರದಿ ಬಂದ ನಂತರ ಏನೆಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಕಲ್ಲುಕ್ವಾರಿ ದುರಂತದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಪೋಟದಿಂದಾಗಿ ಈ ದುರಂತ ಸಂಭವಿಸಿಲ್ಲ ಎಂಬ ಮಾಹಿತಿ ಇದ್ದು, ಎಲ್ಲದರ ಬಗ್ಗೆ ವರದಿ ನೀಡುವಂತೆ ಕೇಳಿದ್ದೇನೆ ವರದಿ ಬಂದ ನಂತರ ಕ್ರಮಗಳು ಆಗಲಿವೆ ಎಂದರು.


ಇಂತಹ ಘಟನೆಗಳು ಮತ್ತೆ ಮರುಕಳುಹಿಸದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ಈ ಕಲ್ಲುಗಣಿ ಕಾನೂನು ಬದ್ಧವಾಗಿ ನಡೆಯುತ್ತಿದೆಯೇ ಇಲ್ಲವೋ ಎಂಬ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗಣಿ ನಡೆಸುವಾದಗ ಅದರದ್ದೆ ಆದ ಪಾಲನೆಗಳು ಇರುತ್ತವೆ. ಪಾಲನೆ ಆಗಿದೆಯೇ ಇಲ್ಲವೋ ಎಂದು ಪರಿಶೀಲನೆ ನಡೆಸಲಾಗುವುದು ಎಂದರು.


ಕಳೆದ ಬಾರಿ ಸ್ಪೋಟದ ಸಂದರ್ಭದಲ್ಲಿ ಚಿರತೆ ಸತ್ತಿತ್ತು. ಹಿಂದೆ ತನಿಖೆ ಮಾಡದೆ ಪ್ರಕರಣ ಮುಚ್ಚಿ ಹಾಕಲಾಗಿದೆ ಎಂದು ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ಆರೋಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ನಮಗೆ ಮಾಹಿತಿ ನೀಡಿದ್ದು, ಅಧಿಕೃತ ವರದಿ ತರಿಸಿಕೊಂಡು ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದರು
ಪರಿಹಾರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿಗಳು ಬರಲಿ ಆನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡುತ್ತೇವೆ. ತರಾತುರಿಯಲ್ಲಿ ಪರಿಹಾರ ಘೋಷಿಸಿದ ಮಾತ್ರಕ್ಕೆ ಸತ್ತವರು ಮರಳಿ ಬರುವುದಿಲ್ಲ. ಇದಕ್ಕೆ ಅದರದ್ದೆ ಆದ ಪ್ರಕ್ರಿಯೆಗಳಿವೆ.ಖಂಡಿತವಾಗಿ ಸಂತ್ರಸ್ತರಿಗೆ ಪರಿಹಾರ ನೀಡುಲಾಗವುದು ಎಂದರು.