
ಕಲಬುರಗಿ,ಜು.4-ನಗರ ಪೊಲೀಸ್ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೆಜಮೆಂಟ್ ಸಿಸ್ಟಮ್ (ಐಟಿಎಂಎಸ್) ತಂತ್ರಾಂಶವನ್ನು 7.5.2026 ರಿಂದ ಜಾರಿಗೊಳಿಸಲಾಗಿದೆ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.
ನಗರದಲ್ಲಿ 7.5.2026 ರಿಂದ ಇಲ್ಲಿಯವರೆಗೆ 13,73,784 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತು ಎ1 ಕ್ಯಾಮೆರಾಗಳ ಮೂಲಕ ಸೆರೆ ಹಿಡಿಯಲಾಗಿದೆ. ಕಳೆದ ಜೂನ್ ತಿಂಗಳಲ್ಲಿ 3,85,500 ಪ್ರಕರಣಗಳು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿರುವುದು, 1,25,072 ಪ್ರಕರಣಗಳು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿರುವುದು, 11,435 ಪ್ರಕರಣಗಳು ತ್ರಿಬಲ್ ರೈಡಿಂಗ್ ಮಾಡಿರುವುದು. 3,201 ಪ್ರಕರಣಗಳು ವಾಹನ ಚಲಾಯಿಸುವಾಗ ಮೊಬೈಲ್ ಬಳಸಿರುವುದು, 169 ಪ್ರಕರಣಗಳು ಸಿಗ್ನಲ್ ಜಂಪ್ ಮಾಡಿರುವುದು ಕಂಡು ಬಂದಿರುತ್ತದೆ. ಇದರಲ್ಲಿ 40,285 ಚಲನ್ಗಳನ್ನು ಸೃಷ್ಟಿಸಲಾಗಿದ್ದು, ಅದರಲ್ಲಿ 250 ಜನರಿಂದ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ 1,30,000 ರೂಪಾಯಿ ದಂಡ ವಸೂಲಿ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಆರಂಭದಲ್ಲಿ ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳದೆ ವಿನಾಯಿತಿಯನ್ನು ನೀಡಲಾಗಿತ್ತು. ಕಳೆದ ತಿಂಗಳಿಂದ ಶಾಲಾ ಕಾಲೇಜುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ, ಯುವಕರಿಗೆ, ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಲಾಗಿದೆ. ಆದರೂ ಕೂಡ ಸಾರ್ವಜನಿಕರು ಸಂಚಾರಿ ನಿಯಮಗಳ ಪಾಲನೆ ಅಲ್ಪ ಮಟ್ಟದಲ್ಲಿ ಕಂಡು ಬಂದಿದೆ. ಕಾರಣ ವಿದ್ಯಾರ್ಥಿಗಳು, ಯುವಕರು, ಆಟೋ ಚಾಲಕರು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಹಿನ್ನೆಲೆಯಲ್ಲಿ ನಗರದಲ್ಲಿ 8 ರಿಂದ 10 ಪೊಲೀಸ್ ತಂಡಗಳು ಪ್ರತಿದಿನ ಯಾವುದೇ ಸಮಯದಲ್ಲಿ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕರ್ತವ್ಯ ನಿರ್ವಹಿಸಲಿದ್ದು, ಸದರಿ ತಂಡದಲ್ಲಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು, ಪೊಲೀಸ್ ಇನ್ಸಪೆಕ್ಟರ್ಗಳು ಇರಲಿದ್ದಾರೆ. ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು ಮತ್ತು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು, ಕುಡಿದು ವಾಹನ ಚಲಾಯಿಸವುದು, ಮೊಬೈಲ್ ಬಳಸುತ್ತ ವಾಹನ ಚಲಾಯಿಸುವುದು, ನೋ ಪಾರ್ಕಿಂಗ್, ತಪ್ಪು ದಾರಿ ಚಲಿಸುವುದು, ತ್ರಿಬಲ್ ರೈಡ್, ಸಿಗ್ನಲ್ ಜಂಪ್, ಓವರ್ ಸ್ಪೀಡ್ ಇನ್ನಿತರ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಬಾಬ್ದಾರಿಯಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.


























