Home Lead News ಕಂದಮ್ಮಗಳಿಗೆ ಕಿರುಕುಳ ಇಬ್ಬರ ಸೆರೆ

ಕಂದಮ್ಮಗಳಿಗೆ ಕಿರುಕುಳ ಇಬ್ಬರ ಸೆರೆ

ಬೆಂಗಳೂರು,ಜು.೩-ಮಕ್ಕಳ ಸುರಕ್ಷತೆ ಲೆಕ್ಕಿಸದೆ, ೨-೩ ವರ್ಷದ ಕಂದಮ್ಮಗಳ ಮೇಲೆ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದ ಇಬ್ಬರನ್ನು ಹೆಚ್ ಎಎಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಹೆಚ್‌ಎಎಲ್ ನ ಮಂಜುಳಾ ಹಾಗೂ ವಿಜಯಲಕ್ಷ್ಮೀ ಬಂಧಿತ ಆರೋಪಿಗಳಾಗಿದ್ದು,ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಳಿದ ಮೂವರು ಆರೋಪಿಗಳಾದ ಭವಾನಿ, ಸಿಂಧು, ಬಿಂದು ಅವರ ಪಾತ್ರ ಮೇಲ್ನೋಟಕ್ಕೆ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಕಳುಹಿಸಿ ಮತ್ತೆ ವಿಚಾರಣೆಗೆ ಬರಲು ಮೂವರಿಗೆ ನೋಟಿಸ್ ನೀಡಲಾಗಿದೆ.


ಬಂಧಿತ ಆರೋಪಿಗಳ ವಿರುದ್ಧ ಬಾಲನ್ಯಾಯ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಸೆಕ್ಷನ್ ೩೫೧ (ಅಪರಾಧದ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.


ಈ ನಡುವೆ ದೈಹಿಕ ಹಿಂಸೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕ್ಯಾಪ್‌ಜೆಮಿನಿ ಕಂಪನಿಯ ಡೇಕೇರ್ ಅನ್ನು ಮುಚ್ಚಲಾಗಿದೆ.


ಅಳುತ್ತಿದ್ದ, ಹಠ ಹಿಡಿಯುತ್ತಿದ್ದ ಮಕ್ಕಳನ್ನು ಬೆದರಿಸಲು ಡೇಕೇರ್ ಸಿಬ್ಬಂದಿಗಳು, ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಒಳಗೆ ಕೂರಿಸುವುದು, ಬಾಯೊಳಗೆ ವೆಸ್ಟರ್ನ್ ಟಾಯ್ಲೆಟನ್‌ನ ಜೆಟ್ ಸ್ಪೇ ಹಿಡಿಯುವುದು, ಬಾತ್‌ರೂಂನಲ್ಲಿ ಹಾಕಿ ಬಾಗಿಲು ಹಾಕುವುದು ಸೇರಿದಂತೆ ನಾನಾ ಕಿರುಕುಳ ಕೊಡಲಾಗುತ್ತಿತ್ತು.


ಇದು ಎಚ್‌ಎಲ್ ಕ್ಯಾಂಪಸ್‌ನ ಕ್ಯಾಪ್‌ಜೆಮಿನಿ ಕಂಪನಿಯ ಡೇಕೇರ್‌ನಲ್ಲಿ ನಡೆದ ಘಟನೆಯಾಗಿದ್ದು ತಾತ್ಕಾಲಿಕವಾಗಿ ಶಿಶವಿಹಾರವನ್ನು ಬಂದ್ ಮಾಡಲಾಗಿದೆ.
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕೆಲ ದಿನಗಳ ಹಿಂದೆ ದೂರು ನೀಡಿದ್ದ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.


ಈ ಹಿಂದೆಯೂ ಹಲವು ಬಾರಿ ಮಕ್ಕಳ ಮೇಲೆ ದೌರ್ಜನ್ಯ ಆದಾಗ ಮೇಲ್ವಿಚಾರಕರ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಮೊದಲೇ ಹೇಳಿದ್ದ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಬಳಿಕ ಇದೇ ಡೇಕೇರ್ ನಲ್ಲಿ ಕೆಲಸಮಾಡುತ್ತಿದ್ದ ಮತ್ತೊಬ್ಬರು ಸ್ನೇಹಿತ ಸಿಬ್ಬಂದಿಯ ಮೂಲಕ ಈ ವಿಡಿಯೋ ಮಾಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಈ ನಡುವೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಈ ಘಟನೆ ಬಹಳ ಗಂಭೀರವಾದುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಇತರ ಡೇ ಕೇರ್ ಸೆಂಟರ್ ಗಳೂ ನಿಯಮ ಪಾಲಿಸುತ್ತಿವೆಯೇ ಎಂದು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.


ಸಂಸ್ಥೆಯ ಪ್ರತಿಕ್ರಿಯೆ:


ನಮ್ಮ ಉದ್ಯೋಗಿಗಳು ಹಾಗೂ ಅವರ ಕುಟುಂಬದವರ ಆರೋಗ್ಯ-ಸುರಕ್ಷತೆಗೆಮೊದಲ ಆದ್ಯತೆ ಕೊಡುತ್ತೇವೆ. ಘಟನೆಯ ಸತ್ಯಾಸತ್ಯತೆ ಹೊರತರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ಕೊಡುತ್ತೇವೆ. ಮುನ್ನೆಚ್ಚರಿಕಾ ಕ್ರಮವಾಗಿ, ಬೆಂಗಳೂರು ಕ್ಯಾಂಪಸ್‌ನ ಡೇಕೇರ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ ಎಂದು ಹೇಳಿದೆ.


ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಿಲಕೇಶ್ ಕುಮಾರ್ ಅವರಿಗೆ ವಾಟ್ಸಾಪ್ ಮೂಲಕ ಈ ವಿಡಿಯೋಗಳು ಬಂದಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಿದ್ದ ಸಿಬ್ಬಂದಿಯೊಬ್ಬರ ಸ್ನೇಹಿತ ಈ ವಿಡಿಯೋಗಳನ್ನು ಮಾಡಿದ್ದಾನೆ ಎನ್ನಲಾಗಿದೆ.

ಬ್ರ್ಯಾಂಡ್ ಬೆಂಗಳೂರು ಹೆಸರಿಗೆ ಧಕ್ಕೆ: ಪ್ರಿಯಾಂಕ್


ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಡೇ ಕೇರ್ ಒಂದರಲ್ಲಿ ಮಗುವಿನ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಇಂತಹ ಘಟನೆಗಳು ಕೇವಲ ಆಯಾ ಸಂಸ್ಥೆಯ ಶ್ರೇಯಸ್ಸಿಗೆ ಮಾತ್ರವಲ್ಲ, ಇಡೀ ’ಬ್ರ್ಯಾಂಡ್ ಬೆಂಗಳೂರು’ ಹೆಸರಿಗೂ ಧಕ್ಕೆ ತರುತ್ತವೆ” ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನಗರದ ಡೇ ಕೇರ್ ಒಂದರಲ್ಲಿ ಮಗುವಿನ ಮೇಲೆ ಹಲ್ಲೆಯಾಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ , “ಡೇ ಕೇರ್ ಕೇಂದ್ರಗಳನ್ನು ನಡೆಸಲು ಕಟ್ಟುನಿಟ್ಟಾದ ನಿಯಮಗಳು ಮತ್ತು ಮಾರ್ಗಸೂಚಿಗಳಿವೆ. ಆದರೆ ಈ ಪ್ರಕರಣದಲ್ಲಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ. ಕೇವಲ ಕಂಪನಿಯ ಪ್ರತಿಷ್ಠೆಗಿಂತ ನಮಗೆ ಮಕ್ಕಳ ಸುರಕ್ಷತೆ ಮುಖ್ಯ. ಇಂತಹ ಬೇಜವಾಬ್ದಾರಿತನದಿಂದ ಇಡೀ ಬೆಂಗಳೂರಿನ ಹೆಸರೇ ಕೆಡುತ್ತದೆ,” ಎಂದ ಅವರು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.


“ಮತದಾನದ ಹಕ್ಕು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ “ರಾಮನಗರದ ಕಲ್ಯಾಣ ಮಂಟಪವೊಂದರಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾದ ವಿಚಾರವಾಗಿ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಖರ್ಗೆ, “ಇಲ್ಲಿ ಹೆಚ್.ಡಿ. ಕುಮಾರಸ್ವಾಮಿ ವರ್ಸಸ್ ಡಿ.ಕೆ. ಶಿವಕುಮಾರ್ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾರೊಬ್ಬರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ನಾವು ಈ ಬಗ್ಗೆ ಕೇಳಿದ ೧೨ ಪ್ರಶ್ನೆಗಳಿಗೆ ಇನ್ನು ಕೂಡ ಉತ್ತರ ಬಂದಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮುಖ್ಯಮಂತ್ರಿಗಳು ಪ್ರತಿ ಬೂತ್ ಮಟ್ಟದಲ್ಲಿ ಏನಾಗುತ್ತಿದೆ ಎಂದು ಸ್ವತಃ ಹೋಗಿ ನೋಡಲು ಸಾಧ್ಯವಿಲ್ಲ. ಸ್ಥಳೀಯ ನಾಯಕರು ಪ್ರಕ್ರಿಯೆ ಬೇಗ ಮುಗಿಯಲಿ ಎಂಬ ಉದ್ದೇಶದಿಂದ ಕಲ್ಯಾಣ ಮಂಟಪವನ್ನು ಬಳಸಿಕೊಂಡಿರಬಹುದು. ಇನ್ನುಳಿದದ್ದನ್ನು ಚುನಾವಣಾ ಆಯೋಗವೇ ನೋಡಿಕೊಳ್ಳುತ್ತದೆ. ಪ್ರತಿಯೊಂದರಲ್ಲೂ ಬಿಜೆಪಿ-ಜೆಡಿಎಸ್ ರಾಜಕೀಯ ಹುಡುಕುವುದನ್ನು ನಿಲ್ಲಿಸಬೇಕು,” ಎಂದು ತಿರುಗೇಟು ನೀಡಿದರು.


ಇಸ್ರೋ ಸಂಸ್ಥೆಗೆ ಬಂದಿರುವ ಬಾಂಬ್ ಬೆದರಿಕೆ ಇಮೇಲ್ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, “ಬೆದರಿಕೆ ಕರೆ ಹಾಗೂ ಇಮೇಲ್‌ಗಳ ಬಗ್ಗೆ ಸರ್ಕಾರ ಈಗಾಗಲೇ ಎಚ್ಚೆತ್ತುಕೊಂಡಿದ್ದು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಇಂತಹ ನಕಲಿ ಇಮೇಲ್‌ಗಳ ಮೂಲ ಪತ್ತೆ ಹಚ್ಚುವುದು ತಾಂತ್ರಿಕವಾಗಿ ತೀರಾ ಕಷ್ಟಸಾಧ್ಯ. ಆರೋಪಿಗಳು ಬೇರೆ ಯಾವುದೋ ದೇಶದಲ್ಲಿ ಕುಳಿತು ಇಂತಹ ಕೃತ್ಯ ಎಸಗುವುದರಿಂದ ತನಿಖೆ ವಿಳಂಬವಾಗುತ್ತದೆ, ಆದರೂ ನಮ್ಮ ಸೈಬರ್ ವಿಭಾಗ ಅಲರ್ಟ್ ಆಗಿದೆ,” ಎಂದರು.


ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ ಪ್ರಿಯಾಂಕ್ ಖರ್ಗೆ, “ಅಲ್ಲಿ ಯಾರದ್ದೋ ವೈಯಕ್ತಿಕ ಅಭಿಪ್ರಾಯ ನಮಗೆ ಮ್ಯಾಟರ್ ಆಗುವುದಿಲ್ಲ. ನಾನು ಇರಬಹುದು, ನೀವಿರಬಹುದು ಅಥವಾ ಅವರೇ ಇರಬಹುದು; ಎಲ್ಲರೂ ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರವೇ ಮುನ್ನಡೆಯಬೇಕಾಗುತ್ತದೆ,” ಎಂದು ಸ್ಪಷ್ಟಪಡಿಸಿದರು.

“ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದು ಪೋಲಾಗುತ್ತಿದೆ ಎಂಬುದನ್ನು ಅವರೂ ಒಪ್ಪಿಕೊಂಡಿದ್ದಾರೆ. ಆ ನೀರನ್ನು ಕನ್ನಡಿಗರ ಸದ್ಬಳಕೆಗೆ ಬಳಸಿಕೊಳ್ಳಬಹುದು. ಮೇಕೆದಾಟು ಕೇವಲ ಒಂದು ಬೆಳೆಯ ವಿಚಾರವಲ್ಲ, ಇದು ಇಡೀ ಬೆಂಗಳೂರಿನ ಕುಡಿಯುವ ನೀರು ಹಾಗೂ ನಮ್ಮ ರೈತರ ಹಿತರಕ್ಷಣೆಗೆ ಸಂಬಂಧಿಸಿದ್ದು. ಒಟ್ಟಾರೆಯಾಗಿ ಇದೊಂದು ದೊಡ್ಡ ಆರ್ಥಿಕ ಚಟುವಟಿಕೆಯಾಗಿದ್ದು, ನಮ್ಮ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ” ಎಂದರು.