
ನವದೆಹಲಿ.ಜು-೧: ವಾಣಿಜ್ಯ ಉದ್ದೇಶಗಳಿಗೆ ಬಳಸುವ ೧೯ ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಭಾರಿ ಕಡಿತ ಪ್ರಕಟಿಸಿವೆ. ಪ್ರತಿ ಸಿಲಿಂಡರ್ ದರದಲ್ಲಿ ೧೮೩.೫೦ ರೂಪಾಯಿಗಳನ್ನು ಕಡಿತಗೊಳಿಸಿದ್ದು,ಹೋಟೆಲ್ ಉದ್ಯಮಿಗಳು ಕೊಂಚ ನಿರಾಳರಾಗಿದ್ದಾರೆ. ಪರಿಷ್ಕೃತ ದರಗಳು ಇಂದು ಮುಂಜಾನೆಯಿಂದಲೇ ಜಾರಿಗೆ ಬಂದಿವೆ.
ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸತತವಾಗಿ ಏರಿಕೆ ಕಾಣುತ್ತಿದ್ದ ಗ್ಯಾಸ್ ದರದಿಂದ ಕಂಗೆಟ್ಟಿದ್ದ ಸಣ್ಣ ಹೋಟೆಲ್, ಧಾಬಾ ಮಾಲೀಕರು ಮತ್ತು ಆಹಾರೋದ್ಯಮದ ವರ್ತಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತೈಲ ಕಂಪನಿಗಳ ಈ ನಿರ್ಧಾರಕ್ಕೆ ಮುನ್ನ ಜೂನ್ ೨೫ ರಂದೇ ಕೇಂದ್ರ ಸರ್ಕಾರವು ವಾಣಿಜ್ಯ ಎಲ್‌ಪಿಜಿ ಪೂರೈಕೆಯ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿ, ಯಥಾಸ್ಥಿತಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ದೆಹಲಿಯಲ್ಲಿ ೨,೯೩೦ ರೂ.ಗೆ ಲಭ್ಯ
ಇಂದಿನ ದರ ಕಡಿತದ ಬಳಿಕ ದೇಶದ ರಾಜಧಾನಿ ಹೊಸ ದೆಹಲಿಯಲ್ಲಿ ೧೯ ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ೨,೯೩೦ ರೂಪಾಯಿಗಳಿಗೆ ತಲುಪಿದೆ. ಇದಕ್ಕೂ ಮುನ್ನ ಇದರ ಬೆಲೆ ೩,೧೧೩.೫೦ ರೂಪಾಯಿಗಳಷ್ಟಿತ್ತು. ಆದರೆ, ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಈ ಬಾರಿ ಯಾವುದೇ ದರ ಕಡಿತದ ಭಾಗ್ಯ ಸಿಕ್ಕಿಲ್ಲ. ೧೪.೨ ಕೆಜಿ ತೂಕದ ಗೃಹಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದು ಹಿಂದಿನಂತೆ ೯೪೨ ರೂಪಾಯಿಗಳಲ್ಲೇ ಮುಂದುವರಿದಿದೆ.
ಪ್ರಮುಖ ನಗರಗಳಲ್ಲಿನ ಪರಿಷ್ಕೃತ ದರ ಪಟ್ಟಿ
ಲಕ್ನೋ:೩,೨೩೬ ಇದ್ದ ದರವು ಈಗ ೩,೦೫೨.೫೦ ಕ್ಕೆ ಇಳಿಕೆಯಾಗಿದೆ. ಕೋಲ್ಕತಾ: ೩,೨೫೫.೫೦ ಇದ್ದ ದರವು ಪ್ರಸ್ತುತ ೩,೦೮೧.೫೦ ಕ್ಕೆ ಇಳಿದಿದೆ.ಪಾಟ್ನಾ: ಪರಿಷ್ಕೃತ ದರದ ಅನ್ವಯ ಈಗ ಹೊಸ ಬೆಲೆ ೩,೨೨೭ ಆಗಿದೆ.ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಬೆಲೆ ಏರಿಕೆಯ ಹಿನ್ನೆಲೆ ಸದ್ಯ ದರ ಇಳಿಕೆಯಾಗಿದ್ದರೂ, ಕಳೆದ ನಾಲ್ಕು ತಿಂಗಳುಗಳಿಂದ ವಾಣಿಜ್ಯ ಗ್ಯಾಸ್ ದರ ಆಕಾಶಕ್ಕೇರಿತ್ತು. ಈ ವರ್ಷದ ಫೆಬ್ರವರಿ ೨೮ ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯು ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿತ್ತು.
ಪ್ರತಿಕಾರವಾಗಿ ಇರಾನ್ ತನ್ನ ನಿಯಂತ್ರಣದಲ್ಲಿದ್ದ ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲ ಸಾಗಿಸುವ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳು ತೀವ್ರವಾಗಿ ಹೆಚ್ಚಳ ಕಂಡಿದ್ದವು.
ಇದರ ನೇರ ಪರಿಣಾಮವಾಗಿ ಭಾರತದಲ್ಲಿ ತೈಲ ಕಂಪನಿಗಳು ತಮಗಾಗುತ್ತಿದ್ದ ನಷ್ಟ ಸರಿದೂಗಿಸಲು ಕಳೆದ ನಾಲ್ಕು ತಿಂಗಳಲ್ಲಿ ಸತತವಾಗಿ ನಾಲ್ಕು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿದ್ದವು. ಮಾರ್ಚ್‌ನಲ್ಲಿ ೧೪೪, ಏಪ್ರಿಲ್‌ನಲ್ಲಿ ೧೯೫.೫೦, ಮೇ ತಿಂಗಳಲ್ಲಿ ಬರೋಬ್ಬರಿ ೯೯೩ ಮತ್ತು ಜೂನ್‌ನಲ್ಲಿ ೪೨ ರಂತೆ ಒಟ್ಟಾರೆ ೧,೩೭೪.೫೦ ರೂಪಾಯಿಗಳಷ್ಟು ಭಾರೀ ಏರಿಕೆ ಮಾಡಲಾಗಿತ್ತು. ಇದೇ ಅವಧಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆಯನ್ನೂ ಸಹ ಒಟ್ಟು ಎರಡು ಕಂತುಗಳಲ್ಲಿ (ಮಾರ್ಚ್‌ನಲ್ಲಿ ೬೦ ಹಾಗೂ ಜೂನ್‌ನಲ್ಲಿ ೨೯) ಒಟ್ಟು ೮೯ ಗಳಷ್ಟು ಹೆಚ್ಚಿಸಲಾಗಿತ್ತು.
ಪೆಟ್ರೋಲ್ ರಫ್ತು ಸುಂಕ ಹೆಚ್ಚಳ
ಇದೇ ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್ ರಫ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿ ತಂದಿದೆ. ಜುಲೈ ೧ ರಿಂದ ಅನ್ವಯವಾಗುವಂತೆ ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ೧.೫ ರಿಂದ ೪ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಲಭ್ಯತೆಯನ್ನು ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಆಟೋ ಎಲ್‌ಪಿಜಿ ದರ ೧೦ ರೂ. ಇಳಿಕೆ
ನಿರಂತರ ಎಲ್‌ಪಿಜಿ ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ ಚಾಲಕರಿಗೆ ಕೊನೆಗೂ ದೊಡ್ಡ ನಿರಾಳ ಸಿಕ್ಕಿದ್ದು,ಟೋಟಲ್ ಗ್ಯಾಸ್ ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ ಭರ್ಜರಿ ೧೦ ರೂಪಾಯಿಗಳಷ್ಟು ಕಡಿತಗೊಳಿಸಿದೆ.
ಸದ್ಯ ಜಾಗತಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಇತ್ತೀಚೆಗಷ್ಟೇ ಹಂತ-ಹಂತವಾಗಿ ೯೫ ರೂಪಾಯಿಗಳಿಗೆ ಇಳಿಕೆಯಾಗಿದ್ದ ದರ ಇದೀಗ ಮತ್ತೊಂದು ದೊಡ್ಡ ಕುಸಿತ ಕಂಡಿದ್ದು, ಪ್ರಸ್ತುತ ೯೫ ರೂಪಾಯಿಗಳಿಂದ ನೇರವಾಗಿ ೮೫ ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ
ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಏರುಪೇರಾಗಿತ್ತು. ಇದರ ನೇರ ಪರಿಣಾಮವಾಗಿ ಆಟೋ ಎಲ್‌ಪಿಜಿ ದರವು ಸಾರ್ವಕಾಲಿಕ ದಾಖಲೆಯ ಬರೋಬ್ಬರಿ ೧೦೦ ರೂಪಾಯಿಗಳ ಗಡಿಯನ್ನು ದಾಟಿತ್ತು. ಇದು ದೈನಂದಿನ ಜೀವನಕ್ಕಾಗಿ ಆಟೋ ಬಾಡಿಗೆಯನ್ನೇ ನಂಬಿಕೊಂಡಿದ್ದ ಲಕ್ಷಾಂತರ ಚಾಲಕರ ಜೇಬಿಗೆ ಕತ್ತರಿ ಹಾಕಿತ್ತು.
ಈಗ ಲೀಟರ್‌ಗೆ ೧೦ ರೂಪಾಯಿ ಕಡಿಮೆಯಾಗಿರುವುದು ದೊಡ್ಡ ರಿಲೀಫ್ ಸಿಕ್ಕಿದೆ ಎಂದು ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬೆಲೆ ಇಳಿಕೆಯಿಂದಾಗಿ ಸಾರ್ವಜನಿಕ ಸಾರಿಗೆಯ ಮೇಲಿನ ದರಗಳ ಒತ್ತಡವೂ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ


























