Home ಜಿಲ್ಲೆ ತುಮಕೂರು ಕೆಪಿಎ ಆಸರೆ ಯೋಜನೆ ಸದಸ್ಯತ್ವ ನೋಂದಣಿಗೆ ಚಾಲನೆ

ಕೆಪಿಎ ಆಸರೆ ಯೋಜನೆ ಸದಸ್ಯತ್ವ ನೋಂದಣಿಗೆ ಚಾಲನೆ

ತುಮಕೂರು, ಜೂ. ೨- ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ, ಬೆಂಗಳೂರು ಇವರ ನೇತೃತ್ವದಲ್ಲಿ ಕೆಪಿಎ ಆಸರೆ ಯೋಜನೆಯನ್ನು ಉದ್ಘಾಟಿಸಲಾಯಿತು.


ಈ ಯೋಜನೆಯಲ್ಲಿ ಸದಸ್ಯನಾದ ಛಾಯಾಗ್ರಾಹಕ ನಿಧನ ಹೊಂದಿದರೆ ಅಂತಹ ಛಾಯಾಗ್ರಾಹಕನ ಕುಟುಂಬಕ್ಕೆ ೧ ಲಕ್ಷ ರೂ. ನೆರವನ್ನು ನೀಡುವ ವಿಶೇಷ ಯೋಜನೆ ಇದಾಗಿದ್ದು, ಈ ಯೋಜನೆಗೆ ನೋಂದಣಿ ಆರಂಭಿಸಲಾಯಿತು.


ಈ ಯೋಜನೆಯಲ್ಲಿ ಸದಸ್ಯತ್ವ ಪಡೆಯಲು ೧೧೦ ರೂ. ನೀಡಿ ಸದಸ್ಯತ್ವ ಪಡೆಯಬೇಕು. ಆಕಸ್ಮಾತ್ ಈ ಯೋಜನೆಯ ಸದಸ್ಯರು ಯಾರಾದರೂ ನಿಧನ ಹೊಂದಿದರೆ ಅಂತಹ ಸಂದರ್ಭದಲ್ಲಿ ೧೦ ರೂ. ಸಹಾಯ ಧನ ನೀಡಬೇಕು, ತಾವು ನೀಡುವ ಸಹಾಯ ಧನ ೧೦ ರೂ. ಒಟ್ಟಾಗಿ ಸೇರಿಸಿ ನಿಧನ ಹೊಂದಿದ ಛಾಯಾಗ್ರಾಹಕನ ಕುಟುಂಬಕ್ಕೆ ೧ ಲಕ್ಷ ರೂ ಆರ್ಥಿಕ ನೆರವನ್ನು ನೀಡುವ ವಿಶೇಷ ಯೋಜನೆ ಇದಾಗಿದೆ ಎಂದು ಕೆಪಿಎ ರಾಜ್ಯಾಧ್ಯಕ್ಷ ಹೆಚ್.ಎಸ್. ನಾಗೇಶ್ ಮಾಹಿತಿ ನೀಡಿದರು.


ಕೆಪಿಎ ಆಸರೆ ಯೋಜನೆ ನೋಂದಣಿ ಕಾರ್ಯಕ್ರಮವನ್ನು ದಕ್ಷಿಣ ಭಾರತ ಫೋಟೋ ಮತ್ತು ವಿಡಿಯೋ ಸಂಘದ ಎಸ್. ಪರಮೇಶ್ ಉದ್ಘಾಟಿಸಿ ಮಾತನಾಡಿ, ಛಾಯಾಗ್ರಾಹಕರ ಒಳಿತಿಗಾಗಿ ಈ ಯೋಜನೆ ಮಾಡಿದ್ದು, ಪ್ರತಿಯೊಬ್ಬ ಛಾಯಾಗ್ರಾಹಕರೂ ಈ ಯೋಜನೆಯ ಪ್ರಯೋಜನ ಪಡೆಯಬೇಕು. ಇದೊಂದು ಸುರಕ್ಷತೆಯ ಯೋಜನೆಯಾಗಿದ್ದು, ರಾಜ್ಯಾದ್ಯತ ಈ ಯೋಜನೆಯ ಸದಸ್ಯತ್ವ ಆರಂಭಗೊಂಡಿದ್ದು, ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯಿರಿ ಎಂದು ತಿಳಿಸಿದರು.


ಸಭೆಯಲ್ಲಿ ಹಿರಿಯ ಛಾಯಾಗ್ರಾಹಕ ಗುರುಶ್ರೀ ಶ್ರೀನಿವಾಸ್, ವಿಶ್ವನಾಥ್ ಸಿಂಗ್, ಕೆಪಿಎ ಉಪಾಧ್ಯಕ್ಷರಾದ ಹೆಚ್.ಎನ್. ರವಿಕುಮಾರ್, ಸ್ಟಾರ್ ಮುರುಳಿ ಸೇರಿದಂತೆ ನೂರಾರು ಛಾಯಾಗ್ರಾಹಕರು, ಕೆಪಿಎ ಆಡಳಿತ ಮಂಡಳಿ ಹಾಗೂ ಕೆಪಿಎ ಆಜೀವ ಸದಸ್ಯರು ಭಾಗವಹಿಸಿದ್ದರು.


ಕೆಪಿಎ ಕಾರ್ಯದರ್ಶಿ ಟಿ.ಸಿ. ನಾಗರಾಜ್ ಸ್ವಾಗತಿಸಿದರು.