
ನವದೆಹಲಿ, ಜು. ೨೮- ಜಂತರ್-ಮಂತರ್‌ನಲ್ಲಿ ಬಿಜೆಪಿ ನಡೆಸಿದ ನೀಟ್ ಅಕ್ರಮದ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಬೇಕು ಮತ್ತು ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ಸೃಷ್ಟಿಯಾಗಿ ಸದನವನ್ನು ಮಧ್ಯಾಹ್ನದವರೆಗೂ ಮುಂದೂಡುವಂತಾಯಿತು.
ಕಳೆದ ೨ ದಿನಗಳಿಂದ ನೀಟ್ ಗದ್ದಲಕ್ಕೆ ರಾಜ್ಯಸಭೆ ಮತ್ತು ಲೋಕಸಭೆಯ ಎರಡು ಕಲಾಪಗಳು ಬಲಿಯಾಗಿದ್ದು, ಇದುವರೆಗೂ ಯಾವುದೇ ಕಲಾಪವನ್ನು ನಡೆಸಲು ಸಾಧ್ಯವಾಗಿಲ್ಲ.
ನಿನ್ನೆ ಗದ್ದಲದಲ್ಲೇ ಪರೀಕ್ಷಾ ಅಕ್ರಮ ತಡೆ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು.
ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ ಬಗ್ಗೆ ಲೋಕಸಭೆಯಲ್ಲಿಂದು ಚರ್ಚೆ ನಡೆದು ಮಸೂದೆಗೆ ಅಂಗೀಕಾರ ಸಿಗಲಿದೆ ಎಂಬ ನಿರೀಕ್ಷೆಗಳು ಇತ್ತಾದರೂ ಇಂದು ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳೆಲ್ಲಾ ಒಟ್ಟಾಗಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಪ್ರಕರಣ ಮತ್ತೆ ಪ್ರಸ್ತಾಪಿಸಿ, ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ, ಪೆಲೆಟ್ ಗನ್ ಬಳಸಿದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದು ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿದರು.
ಪ್ರತಿಪಕ್ಷಗಳ ಘೋಷಣೆಯಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು ಪರೀಕ್ಷಾ ಅಕ್ರಮ ತಡೆಯಂತಹ ಪ್ರಮುಖ ಮಸೂದೆಯನ್ನು ಮಂಡಿಸಲಾಗಿದೆ. ಈ ಬಗ್ಗೆ ಚರ್ಚೆ ಮಾಡೋಣ, ನಂತರ ಉಳಿದಿದ್ದರ ಬಗ್ಗೆ ಮಾತನಾಡೋಣ. ಮಸೂದೆ ಚರ್ಚೆಗೆ ಅವಕಾಶ ನೀಡಿ ಪ್ರತಿಪಕ್ಷ ಸದಸ್ಯರಲ್ಲಿ ಮನವಿ ಮಾಡಿದರಾದರೂ ಅದಕ್ಕೆ ಜಗ್ಗದ ಪ್ರತಿಪಕ್ಷಗಳ ಸದಸ್ಯರು, ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದರ ಬಗ್ಗೆ ಉತ್ತರ ನೀಡಲಿ. ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳ ಕ್ಷಮೆ ಕೇಳಲಿ, ನಂತರ ಮಸೂದೆ ಬಗ್ಗೆ ಚರ್ಚೆ ಎಂದು ಹೇಳಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು.
ಲೋಕಸಭಾಧ್ಯಕ್ಷರ ಯಾವುದೇ ಮನವಿಗೂ ಪ್ರತಿಪಕ್ಷಗಳು ಒಪ್ಪದ ಕಾರಣ ಲೋಕಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ ೨ ಗಂಟೆಗೆ ಮುಂದೂಡಿದರು.
ಇಂದು ಮಧ್ಯಾಹ್ನ ಸದನ ಮತ್ತೆ ಸಮಾವೇಶಗೊಳ್ಳಲಿದ್ದು, ಒಂದು ವೇಳೆ ಪ್ರತಿಪಕ್ಷಗಳು ಪರೀಕ್ಷಾ ಅಕ್ರಮ ತಡೆ ಮಸೂದೆ ಬಗ್ಗೆ ಚರ್ಚೆ ನಡೆಸದೆ ಘೋಷಣೆ ಕೂಗುವುದನ್ನು ಮುಂದುವರೆಸಿದರೆ ಗದ್ದಲದಲ್ಲೇ ಪರೀಕ್ಷಾ ಅಕ್ರಮ ತಡೆ ಮಸೂದೆಗೆ ಸರ್ಕಾರ ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆಯೂ ಇದೆ.
































