Home ಜಿಲ್ಲೆ ತುಮಕೂರು ಪೂರ್ಣಗೊಳ್ಳದ ಗ್ರಾ.ಪಂ. ವಾಚನಾಲಯ ಕಟ್ಟಡ: ಆಕ್ಷೇಪ

ಪೂರ್ಣಗೊಳ್ಳದ ಗ್ರಾ.ಪಂ. ವಾಚನಾಲಯ ಕಟ್ಟಡ: ಆಕ್ಷೇಪ

ಚೇಳೂರು, ಆ. ೧- ಗುಬ್ಬಿ ತಾಲ್ಲೂಕಿನ ಎಂ.ಎನ್. ಕೋಟೆ ಗ್ರಾಮ ಪಂಚಾಯ್ತಿಯಲ್ಲಿ ವಾಚನಾಲಯ ನಿರ್ಮಾಣಗೊಂಡಿದ್ದು, ಅದು ವರ್ಷವಾದರೂ ಪೂರ್ಣಗೊಳ್ಳದೆ ಕಳಪೆಯಿಂದ ಕೂಡಿದೆ ಎಂದು ಎಂಎನ್ ಕೋಟೆಯ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನರಸಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯ್ತಿಯಲ್ಲಿ ವರ್ಷದ ಹಿಂದೆ ಪಂಚಾಯಿತಿ ಮುಂಭಾಗದಲ್ಲಿ ವಾಚನಾಲಯ ನಿರ್ಮಿಸಲು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದರಾಮಯ್ಯ ಗುತ್ತಿಗೆದಾರ ಕಲ್ಲೇಶ್ ಎಂಬುವರ ಹೆಸರಿನಲ್ಲಿ ೯ ಲಕ್ಷಕ್ಕೆ ವಾಚನಾಲಯ ಕಟ್ಟಡ ನಿರ್ಮಿಸಲು ಅನುಮತಿ ಪಡೆದಿದ್ದು, ಒಂದು ವರ್ಷದ ಹಿಂದೆ ಕಟ್ಟಡ ನಿರ್ಮಾಣಕ್ಕಾಗಿ ೪,೮೦,೦೦೦ ನಗದು ಉಪಯೋಗಿಸಿ ಕಟ್ಟಡ ನಿರ್ಮಿಸಿದ್ದಾರೆ.

ವರ್ಷವಾದರೂ ಕಟ್ಟಡವನ್ನು ಅರ್ಧಕ್ಕೆ ನಿಲ್ಲಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ. ಕಟ್ಟಡದ ಒಳಗೆ ನೋಡಿದರೆ ಮೇಲ್ಚಾವಣಿಯ ಸಿಮೆಂಟ್ ಕಳಚಿ ಬಿದ್ದಿದ್ದು, ಗೋಡೆಯೂ ಸಹ ಬಿರುಕು ಬಿಟ್ಟಿದೆ. ಹೊರಗಡೆ ತಳಪಾಯಕ್ಕೆ ಹಾಕಿದ್ದ ಸಿಮೆಂಟ್ ಬರಿ ಮಣ್ಣಿನಿಂದ ಕೂಡಿದ್ದು, ಕೈಯಲ್ಲಿ ಕೆರೆದರೆ ಬೀಳುತ್ತದೆ ಎಂದು ಆರೋಪಿಸಿದರು.


ಕಟ್ಟಡವನ್ನು ಪೂರ್ಣಗೊಳಿಸದೆ ಕಳಪೆ ಕಾಮಗಾರಿ ಮಾಡಿರುವ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಇಂಜಿನಿಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪಂಚಾಯ್ತಿ ಹಣ ದುರುಪಯೋಗ ಮಾಡಿಕೊಂಡಿರುವ ಇವರ ಮೇಲೆ ಮೇಲಾಧಿಕಾರಿಗಳು ತನಿಖೆ ನಡೆಸಿ ಹಣ ದುರುಪಯೋಗವಾಗದಂತೆ ಸೂಕ್ತ ಕಟ್ಟಡ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.


ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ವೀಕ್ಷಣೆ ಮಾಡಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು ಪಂಚಾಯ್ತಿಗೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕು.