
ಮಧುಗಿರಿ, ಜೂ. ೨- ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಆರ್ಭಟಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ವ್ಯಾಪಕ ನಷ್ಟ ಸಂಭವಿಸಿದೆ. ಕೊಡಿಗೇನಹಳ್ಳಿ ಹೋಬಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿರುಗಾಳಿಯ ರೌದ್ರಾವತಾರಕ್ಕೆ ವಿದ್ಯುತ್ ಕಂಬಗಳು, ಅಡಿಕೆ ಮತ್ತು ತೆಂಗಿನ ಮರಗಳು ನೆಲಸಮಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಬೆಳೆಗಳಿಗೆ ಭಾರಿ ಹಾನಿಯುಂಟಾಗಿದೆ.
ಗಡಿಭಾಗದ ಕಡಗತೂರು ಗ್ರಾಮದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿದ್ದು, ರೇಷ್ಮೆ ಕೃಷಿಕರು ಕಂಗಾಲಾಗಿದ್ದಾರೆ. ಚೌಡರೆಡ್ಡಿ ಎಂಬುವವರಿಗೆ ಸೇರಿದ ರೇಷ್ಮೆ ಶೆಡ್ ಸಂಪೂರ್ಣ ಧ್ವಂಸಗೊಂಡಿದೆ. ಗಾಳಿಯ ರಭಸಕ್ಕೆ ಶೆಡ್‌ನ ಕಬ್ಬಿಣದ ರಾಡುಗಳು ಹಾಗೂ ಶೀಟುಗಳು ಹಾರಿ ಹೋಗಿ ನೆಲಸಮಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬಿರುಗಾಳಿ ಮಳೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಜಂಟಿ ಸಮೀಕ್ಷೆ ನಡೆಸಬೇಕು. ನಷ್ಟ್ಟ ಅನುಭವಿಸಿದ ಸಂತ್ರಸ್ತ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


































