Home ಮುಖಪುಟ ಸುದ್ದಿ ನನ್ನ ಬೆಂಬಲದಿಂದಲೇ ಎಚ್‌ಡಿಕೆ ೨ ಬಾರಿ ಸಿಎಂ

ನನ್ನ ಬೆಂಬಲದಿಂದಲೇ ಎಚ್‌ಡಿಕೆ ೨ ಬಾರಿ ಸಿಎಂ

ಮೈಸೂರು, ಜೂ. ೨೮: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಪಕ್ಷ ಕಟ್ಟುವುದಕ್ಕೆ ಶಕ್ತಿ ಇದೆ. ಎರಡು ಬಾರಿ ಸಿಎಂ ಆಗಿ, ಈಗ ಕೇಂದ್ರ ಸಚಿವರಾಗಿದ್ದಾರೆ. ನನಗೂ ಸಚಿವರಾಗಿ ಕೆಲಸ ಮಾಡಲು ಸಹಾಯ ಮಾಡಿದ್ದಾರೆ. ಪಕ್ಷ ಉಳಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಾರೆ. ನನ್ನ ಜನ ಗಟ್ಟಿಗಿದ್ದಾರೆ, ನನ್ನ ಜೊತೆ ನಿಲ್ಲುತ್ತಾರೆ. ಕುಮಾರ ಪರ್ವ ಮಾಡಿದ್ದು ಚಾಮುಂಡೇಶ್ವರಿ ಜನ ಮಾತ್ರ. ಬೇರೆ ಯಾವ ಕ್ಷೇತ್ರದಲ್ಲೂ ಈ ರೀತಿಯ ಸಮಾವೇಶ ಮಾಡಿಲ್ಲ. ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು” ಎಂದು ತಿಳಿಸಿದರು.


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕುರಿತು ಪ್ರತಿಕ್ರಿಯಿಸಿದ ಜಿಟಿಡಿ, “ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಅವರಿಗೆ ಎಲ್ಲಾ ರೀತಿಯ ಅನುಭವ ಇದೆ. ಒಂದೂವರೆ ವರ್ಷದಿಂದ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ. ಜನ ಏನು ಹೇಳುತ್ತಾರೆ ಅದನ್ನ ಮಾಡುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಬಳಿಕ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದರು, ನಾನು ಹೋಗಿದ್ದೀನಾ? ಡಿ.ಕೆ. ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ನಾನು ಭೇಟಿ ಮಾಡಿಲ್ಲ” ಎಂದು ಹೇಳಿದರು.


“ನನಗೆ ಫೋನ್ ನೋಡಲು ಬರಲ್ಲ, ಇನ್‌ಸ್ಟಾಗ್ರಾಂ ನೋಡಲು ಬರಲ್ಲ. ಪಿಎಗಳು ಫೋನ್ ಮಾಡಿಕೊಡುತ್ತಾರೆ. ಎಸ್‌ಎಂಎಸ್ ನೋಡಲು ಬರಲ್ಲ, ಟಿವಿಯನ್ನೂ ನಾನು ನೋಡಿಲ್ಲ. ಹಾಗಾಗಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ” ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು.
“ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದೇ ನನ್ನ ಗುರಿ. ಜನರು ಸಂಪೂರ್ಣವಾಗಿ ಅಭಿವೃದ್ಧಿಗಾಗಿ ಬಂದಿದ್ದಾರೆ. ೨೦೨೮ಕ್ಕೆ ಚುನಾವಣೆಗೆ ನಿಲ್ಲಬೇಕು, ನಿಮ್ಮ ಜೊತೆ ಇರುತ್ತೇವೆ ಎಂದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ” ಎಂದರು.


ಪುತ್ರ ಹರೀಶ್ ಗೌಡ ಜಗಳ ವಿಚಾರ:
ತಮ್ಮ ಪುತ್ರ ಹರೀಶ್ ಗೌಡ ಜೊತೆಗಿನ ಜಗಳದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, “ಯಾವ ಕುಟುಂಬದಲ್ಲಿ ಜಗಳ ಇಲ್ಲ ಹೇಳಿ? ಸಣ್ಣ ಪುಟ್ಟ ಜಗಳಗಳು ಇರುತ್ತವೆ. ಮತ್ತೆ ಅವರು ಒಂದಾಗಲ್ವಾ? ಒಂದಾಗಲ್ಲ ಎಂದು ತಿಳಿದುಕೊಂಡವರು ಮೂರ್ಖರು” ಎಂದು ಅಪ್ಪ-ಮಕ್ಕಳು ಒಂದಾಗುವ ಸೂಚನೆ ನೀಡಿದರು.
“ಎಲ್ಲಾ ಶಾಸಕರಿಗೆ ಕೊಟ್ಟಿರುವ ಹಾಗೇ ನನಗೂ ಕ್ಷೇತ್ರಕ್ಕೆ ೨೫ ಕೋಟಿ ಅನುದಾನ ಕೊಟ್ಟಿದ್ದಾರೆ” ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.