
ಬೆಂಗಳೂರು, ಜೂ. ೨೮- ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಸುಮಾರು ೧.೮೦ ಲಕ್ಷಕ್ಕೂ ಹೆಚ್ಚು ರೈತರ ಆರ್‌ಟಿಸಿಗಳಲ್ಲಿ ವಕ್ಫ್ ಹೆಸರು ಉಲ್ಲೇಖವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು ೧ ಲಕ್ಷ ೮೦ ಸಾವಿರ ರೈತರ ಆರ್‌ಟಿಸಿಗಳಲ್ಲಿ ಈಗಾಗಲೇ ವಕ್ಫ್ ಹೆಸರು ದಾಖಲಾಗಿದೆ. ರೈತರ ಭೂಮಿಯನ್ನು ವಕ್ಫ್ ವಿವಾದಕ್ಕೆ ಸಿಲುಕಿಸಿ ಕಾಂಗ್ರೆಸ್ ಸರ್ಕಾರ ಯಾರ ಹಿತ ಕಾಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಈ ಸಂಪೂರ್ಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ರೈತರ ಆರ್‌ಟಿಸಿಗಳಲ್ಲಿ ದಾಖಲಾಗಿರುವ ಎಲ್ಲಾ ವಿವಾದಾತ್ಮಕ ಉಲ್ಲೇಖಗಳನ್ನು ಮರು ಪರಿಶೀಲಿಸಿ ರಾಜ್ಯದ ಜನರ ಮುಂದೆ ಶ್ವೇತಪತ್ರ ಬಿಡುಗಡೆ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಒಲೈಕೆ ಮತ್ತು ತುಷ್ಟೀಕರಣದ ರಾಜಕಾರಣ ಈಗ ನಾಡಿನ ರೈತರ ಅಸ್ತಿತ್ವಕ್ಕೆ ಕುತ್ತು ತರುವ ಹಂತ ತಲುಪಿದೆ. ರಾಜ್ಯಾದ್ಯಂತ ರೈತರ ಆರ್‌ಟಿಸಿಗಳಲ್ಲಿ ವಕ್ಫ್ ಉಲ್ಲೇಖಗಳನ್ನು ದಾಖಲಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ.
ಈಗಾಗಲೇ ೧ ಲಕ್ಷ ೮೦ ಸಾವಿರಕ್ಕೂ ಹೆಚ್ಚು ರೈತರ ಆರ್‌ಟಿಸಿ ವಕ್ಫ್ ಹೆಸರು ದಾಖಲಾಗಿದೆ. ಒಟ್ಟು ೩ ಲಕ್ಷ ಆರ್‌ಟಿಸಿಗಳನ್ನು ವಕ್ಫ್ ವ್ಯಾಪ್ತಿಗೆ ತರಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ. ರೈತರು ಆತಂಕದಲ್ಲಿದ್ದಾರೆ. ಸರ್ಕಾರ ಈ ಬಗ್ಗೆ ಸತ್ಯ ತಿಳಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ರೈತರ ಆರ್‌ಟಿಸಿಗಳಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿರುವ ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಈ ವರದಿಗಳು ತಪ್ಪಾಗಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ಸತ್ಯಾಂಶವನ್ನು ರೈತರಿಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ತಮ್ಮದೇ ಆದ ಭೂಮಿಯನ್ನು ಮಾರಾಟ ಮಾಡಲು, ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತತೆ ಎದುರಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ. ರೈತರನ್ನು ತಮ್ಮದೇ ಆದ ಜಮೀನಿನಲ್ಲಿ ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದೀರಾ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಅನ್ನದಾತ ರೈತನನ್ನು ತನ್ನದೇ ಭೂಮಿಯ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ನಿಲ್ಲಿಸಿದರೆ ಅನ್ನದಾತನ ಶಾಪ ತಟ್ಟದೇ ಇರದು ಎಂದು ಹೇಳಿದ್ದಾರೆ.
ರೈತನ ಭೂಮಿ ಉಳಿಯಬೇಕು, ರೈತನ ಹಕ್ಕು ಉಳಿಯಬೇಕು, ವಕ್ಫ್ ಹೆಸರಿನಲ್ಲಿ ರೈತರ ಜಮೀನು ನುಂಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.























