
ವಾಷಿಂಗ್ಟನ್/ಟೆಹ್ರಾನ್.ಜೂ೨೮:ಹೊರ್ಮುಜ್ ಜಲಸಂಧಿ ಬಳಿ ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಇರಾನ್‌ನ ಪ್ರಮುಖ ಸೇನಾ ನೆಲೆಗಳ ಮೇಲೆ ಅಮೆರಿಕದ ಪಡೆಗಳು ಭೀಕರ ವೈಮಾನಿಕ ದಾಳಿ ನಡೆಸಿವೆ.
ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಮತ್ತೆ ಕದನ ವಿರಾಮ ಉಲ್ಲಂಘಿಸಿದರೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎಂಬ ದೇಶವೇ ಅಸ್ತಿತ್ವದಲ್ಲಿ ಇರದಂತೆ ಸೇನಾ ಕಾರ್ಯಾಚರಣೆ ಪೂರ್ಣಗೊಳಿಸಬೇಕಾಗುತ್ತದೆ” ಎಂದು ಇರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಕೇವಲ ಎರಡು ವಾರಗಳ ಹಿಂದಷ್ಟೇ ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತ್ತಾದರೂ, ಸದ್ಯದ ದಾಳಿ ಮತ್ತು ಪ್ರತಿಯಾಗ್ರಹಗಳಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಆತಂಕ ಮತ್ತಷ್ಟು ತೀವ್ರಗೊಂಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿ ಪ್ರಕಾರ, ಇರಾನ್ ಪಡೆಗಳು ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಒಪೆಕ್ ತೈಲ ನೌಕೆಯಾದ ’ಎಂ/ವಿ ಎವರ್ ಲವ್ಲಿ’ ಮತ್ತು ಪನಾಮ ಧ್ವಜದ ’ಎಂ/ಟಿ ಕಿಕು’ ಎಂಬ ಕಚ್ಚಾ ತೈಲ ಹೊತ್ತೊಯ್ಯುತ್ತಿದ್ದ ನೌಕೆಗಳ ಮೇಲೆ ಡ್ರೋನ್ ದಾಳಿ ನಡೆಸಿವೆ.
ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಅಮೆರಿಕ ದೂರಿದೆ. ಈ ಹಿನ್ನೆಲೆಯಲ್ಲಿ ಇರಾನ್‌ನ ಕ್ಷಿಪಣಿ, ಡ್ರೋನ್ ದಾಸ್ತಾನು ಮಳಿಗೆಗಳು ಹಾಗೂ ಕರಾವಳಿ ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ತಡರಾತ್ರಿ ಭಾರಿ ದಾಳಿ ನಡೆಸಿದೆ.
ಅಮೆರಿಕದ ದಾಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ಖಚಿತಪಡಿಸಿದೆ. ತನ್ನ ಸಾರ್ವಭೌಮತ್ವದ ರಕ್ಷಣೆಗಾಗಿ ಈ “ರಕ್ಷಣಾತ್ಮಕ” ಕ್ರಮ ಕೈಗೊಂಡಿರುವುದಾಗಿ ಇರಾನ್ ವಿದೇಶಾಂಗ ಸಚಿವಾಲಯ ಸಮರ್ಥಿಸಿಕೊಂಡಿದೆ.
ಅಮೆರಿಕದ ನೌಕಾಪಡೆಯ ಐದನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಹೊಂದಿರುವ ಬಹ್ರೇನ್, ತನ್ನ ಮೇಲೂ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಿದೆ. ಮತ್ತೊಂದೆಡೆ, ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಶುಕ್ರವಾರವಷ್ಟೇ ಘೋಷಣೆಯಾಗಿದ್ದ ಕದನ ವಿರಾಮವೂ ಮುರಿದುಬೀಳುವ ಲಕ್ಷಣಗಳು ಕಾಣಿಸುತ್ತಿವೆ. ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಮತ್ತೆ ಡ್ರೋನ್ ದಾಳಿ ನಡೆಸಿದ್ದು, ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸೆಮ್ ಈ ಶಾಂತಿ ಒಪ್ಪಂದವನ್ನು “ಅಸಿಂಧು” ಎಂದು ಕರೆದಿದ್ದಾರೆ.
ಸದ್ಯ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಜಾಗತಿಕ ನೌಕಾ ಒಕ್ಕೂಟವು ಭದ್ರತಾ ತನಿಖಾ ಮಟ್ಟವನ್ನು ತೀವ್ರಗೊಳಿಸಿದೆ.






















