Home ಮುಖಪುಟ ಸುದ್ದಿ ರಕ್ಷಣೆ ಸ್ವಾವಲಂಬನೆ ದೇಶಕ್ಕೆ ಹೆಮ್ಮೆ

ರಕ್ಷಣೆ ಸ್ವಾವಲಂಬನೆ ದೇಶಕ್ಕೆ ಹೆಮ್ಮೆ

ನವದೆಹಲಿ.ಜೂ೨೮: ೨೦೨೬ರ ಮೊದಲಾರ್ಧ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಆರು ತಿಂಗಳುಗಳಲ್ಲಿ ಭಾರತವು ರಾಷ್ಟ್ರೀಯ ಭದ್ರತೆ ಹಾಗೂ ಸ್ವಾವಲಂಬನೆ (ಆತ್ಮನಿರ್ಭರತೆ) ಕ್ಷೇತ್ರದಲ್ಲಿ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಸಾಧನೆಗಳನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.


ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ ೧೩೫ನೇ ಸಂಚಿಕೆಯ ಮೂಲಕ ಅವರು ದೇಶದ ಜನತೆಯನ್ನುದ್ದೇಶಿಸಿ ಇಂದು ಮಾತನಾಡಿದರು.


ಇತ್ತೀಚಿನ ಕೋಲ್ಕತಾ ಭೇಟಿಯನ್ನು ಸ್ಮರಿಸಿದ ಪ್ರಧಾನಿ, ಭಾರತೀಯ ನೌಕಾಪಡೆಗೆ ಸಂಪೂರ್ಣ ಸ್ವದೇಶಿ ನಿರ್ಮಿತ ‘ಐಎನ್‌ಎಸ್ ದುನಾಗಿರಿ’, ‘ಐಎನ್‌ಎಸ್ ಸಂಶೋಧಕ್’ ಮತ್ತು ‘ಐಎನ್‌ಎಸ್ ಅಗ್ರಯ್’ ಯುದ್ಧನೌಕೆಗಳನ್ನು ಸೇರ್ಪಡೆಗೊಳಿಸಿರುವುದು ದೇಶದ ಹೆಮ್ಮೆಯನ್ನು ಹೆಚ್ಚಿಸಿದೆ ಎಂದರು. “ಈ ನೌಕೆಗಳ ವಿನ್ಯಾಸದಿಂದ ಹಿಡಿದು ತಯಾರಿಕೆಯವರೆಗಿನ ಪ್ರತಿಯೊಂದು ಹಂತವೂ ಭಾರತದಲ್ಲೇ ನಡೆದಿದೆ. ಇದು ನಮ್ಮ ರಕ್ಷಣಾ ಉತ್ಪಾದನಾ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ” ಎಂದು ಅವರು ಹೆಮ್ಮೆಯಿಂದ ನುಡಿದರು.

ಜೊತೆಗೆ, ಜೂನ್ ತಿಂಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ಪರೀಕ್ಷಿಸಿದ ‘ದೂರಗಾಮಿ ಭೂ-ದಾಳಿ ಕ್ರೂಸ್ ಕ್ಷಿಪಣಿ’ ದೇಶದ ರಕ್ಷಣಾ ವಲಯದ ಮತ್ತೊಂದು ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.

ಭಾರತದ ನಾಗರಿಕ ಮತ್ತು ರಕ್ಷಣಾ ವಿಮಾನಯಾನ ರಂಗದಲ್ಲಿ ‘ಮೇಡ್ ಇನ್ ಇಂಡಿಯಾ’ ಸಿ-೨೯೫ (ಅ-೨೯೫) ಸಾರಿಗೆ ವಿಮಾನದ ಯಶಸ್ವಿ ಹಾರಾಟ ಹೊಸ ಕ್ರಾಂತಿ ಸೃಷ್ಟಿಸಿದೆ. ಈ ಮಾದರಿಯ ೪೦ ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಚಿನ್ನದ ಖರೀದಿ ನಿಲ್ಲಿಸಿದ ಜನತೆಗೆ ಧನ್ಯವಾದ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ದೇಶದ ಆರ್ಥಿಕ ಹಿತದೃಷ್ಟಿಯಿಂದ ಸದ್ಯಕ್ಕೆ ಚಿನ್ನದ ಖರೀದಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಈ ಕರೆಗೆ ದೇಶಾದ್ಯಂತ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. “ನನ್ನ ಮನವಿಯನ್ನು ಪುರಸ್ಕರಿಸಿ, ದೇಶದ ಆರ್ಥಿಕತೆಗೆ ಸಹಕರಿಸಿದ ಪ್ರತಿಯೊಬ್ಬ ನಾಗರಿಕನಿಗೂ ನಾನು ಕೃತಜ್ಞನಾಗಿದ್ದೇನೆ. ನೂರಾರು ಕುಟುಂಬಗಳು ಈ ಕುರಿತು ತಮ್ಮ ಸಕಾರಾತ್ಮಕ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ” ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಇಂಧನ ಉಳಿತಾಯ ಹಾಗೂ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಜನರು ಸ್ವಯಂಪ್ರೇರಿತರಾಗಿ ‘ಕಾರ್ ಪೂಲಿಂಗ್’ (ಒಂದೇ ಮಾರ್ಗದಲ್ಲಿ ಚಲಿಸುವವರು ಒಂದೇ ವಾಹನ ಬಳಸುವುದು) ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಮೋದಿ ಶ್ಲಾಘಿಸಿದರು. ಒಂದೇ ದಿಕ್ಕಿನಲ್ಲಿ ನಿತ್ಯ ಕಚೇರಿ ಅಥವಾ ಕೆಲಸಕ್ಕೆ ತೆರಳುವ ಸಾರ್ವಜನಿಕರು ಪ್ರತ್ಯೇಕ ವಾಹನಗಳ ಬದಲಿಗೆ ಒಟ್ಟಾಗಿ ಪ್ರಯಾಣಿಸುತ್ತಿರುವುದು ಶ್ಲಾಘನೀಯ ಎಂದರು.

ಅಗ್ಗದ ಮತ್ತು ಕೈಗೆಟುಕುವ ಸಾಮಾಜಿಕ ಭದ್ರತಾ ಯೋಜನೆಗಳು ದೇಶದ ಕೋಟ್ಯಂತರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ರಕ್ಷಾಕವಚ ಒದಗಿಸುತ್ತಿವೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.