
ರಾಮನ ದುಡ್ಡಿಗೆ ಕನ್ನ ಹಾಕಿದ್ದವರ ಮನೆಗಳ ಶೋಧ ನಡೆಸಿದ ಪೊಲೀಸರು
ಅಯೋಧ್ಯೆ,ಜೂ೨೮: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಂದಿರದ ದೇಣಿಗೆ ಹಣದ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಇಂದು ಬೆಳಗ್ಗೆ ಎಂಟು ಮಂದಿ ಪ್ರಮುಖ ಆರೋಪಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಎಲ್ಲಾ ಎಂಟು ಜನ ಆರೋಪಿಗಳನ್ನು ಜೂನ್ ೨೯ ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಹಣ ಎಣಿಕೆ ವಿಭಾಗದಲ್ಲಿ ತೀವ್ರ ಪ್ರಭಾವ ಹೊಂದಿದ್ದ ಪ್ರಮುಖ ಆರೋಪಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಮನೆ ಬೀಗ ಹಾಕಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಟಿನ್ನು ಯಾದವ್ ಪತ್ನಿ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಮನೀಶ್ ಯಾದವ್ ನಿವಾಸವೂ ಬೀಗ ಹಾಕಿದ ಸ್ಥಿತಿಯಲ್ಲಿದ್ದು, ಕುಟುಂಬಸ್ಥರ ವಿಚಾರಣೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಉಳಿದಂತೆ ಸಹ-ಆರೋಪಿಗಳಾದ ಅವಿನಾಶ್ ಶುಕ್ಲಾ ಮತ್ತು ಅನುಕಲ್ಪ್ ಮಿಶ್ರಾ ಅವರ ಮನೆಗಳ ಮೇಲೆಯೂ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಹಿಂದೆ ಆಟೋ ರಿಕ್ಷಾ ಚಾಲಕನಾಗಿದ್ದ ಟಿನ್ನು ಯಾದವ್, ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಪ್ರಭಾವ ಬಳಸಿ ಮಂದಿರದ ದೇಣಿಗೆ ಎಣಿಕೆ ಕೊಠಡಿ ಹಾಗೂ ದೇಣಿಗೆ ಪೆಟ್ಟಿಗೆಗಳ ಕೀಲಿ ಕೈಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದ್ದ. ದೇಣಿಗೆ ಎಣಿಕೆ ಮೇಲ್ವಿಚಾರಣೆ ನಡೆಸುತ್ತಿದ್ದ ಈತ ಕಳೆದ ಕೆಲವು ಸಮಯದಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದು, ಸದ್ಯ ಪೊಲೀಸರು ಈ ಆಸ್ತಿಯ ಮೂಲದ ಕುರಿತು ತನಿಖೆ ಆರಂಭಿಸಿದ್ದಾರೆ.
ವಿಶೇಷ ತನಿಖಾ ತಂಡ ಏಪ್ರಿಲ್ ೨೭ ರಿಂದ ಜೂನ್ ೫ ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭೀಕರ ಸತ್ಯ ಹೊರಬಿದ್ದಿದೆ. ಕೇವಲ ೩೯ ದಿನಗಳಲ್ಲಿ ಬರೋಬ್ಬರಿ ೭೦ ಬಾರಿ ದೇಣಿಗೆ ಹಣವನ್ನು ಕದಿಯಲಾಗಿತ್ತು. ಬ್ಯಾಂಕ್‌ನಿಂದ ನಿಯೋಜನೆಗೊಂಡಿದ್ದ ಸಿಬ್ಬಂದಿಯೇ ಹಣ ಎಣಿಸುವಾಗ ನೋಟುಗಳ ಕಂತೆಗಳ ನಡುವೆ ಹೆಚ್ಚುವರಿ ನೋಟುಗಳನ್ನು ಮಡಚಿಟ್ಟುಕೊಂಡು, ನಂತರ ಅವುಗಳನ್ನು ಮಂದಿರ ಸಂಕೀರ್ಣದ ಶೌಚಾಲಯಗಳಲ್ಲಿ ಅಡಗಿಸಿಡುತ್ತಿದ್ದರು. ರಾತ್ರಿ ವೇಳೆ ಈ ನಗದನ್ನು ಹೊರಸಾಗಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ಸದ್ಯ ಪೊಲೀಸರು ಆರೋಪಿಗಳಿಂದ ಸುಮಾರು ೭೯.೮೫ ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ ೭ ರಂದು ದೇಣಿಗೆ ದುರುಪಯೋಗದ ಆರೋಪಗಳು ಸಾರ್ವಜನಿಕವಾಗಿ ಕೇಳಿಬಂದ ತಕ್ಷಣ ಉತ್ತರ ಪ್ರದೇಶ ಸರ್ಕಾರ ಜೂನ್ ೧೩ ರಂದು ಎಸ್‌ಐಟಿ ತಂಡವನ್ನು ರಚಿಸಿತ್ತು. ಜೂನ್ ೨೫ ರಂದು ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹಗರಣದ ತೀವ್ರತೆಗೆ ಮಣಿದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಟ್ರಸ್ಟ್ ಇವರ ರಾಜೀನಾಮೆಯನ್ನು ಅಂಗೀಕರಿಸಿದೆ. ಈ ಕುರಿತು ಜುಲೈ ೧೧ ರಂದು ಪ್ರಮುಖ ಸಭೆ ಕರೆಯಲಾಗಿದೆ. ಭಕ್ತರ ಕಾಣಿಕೆ ಹಣಕ್ಕೆ ಕೈಹಾಕಿದ ಯಾರನ್ನೂ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.
ರಾಮಮಂದಿರದ ದೇಣಿಗೆ ಕಳ್ಳತನದ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಪಡೆದಿರುವ ಕುರಿತಾದ ಹೆಚ್ಚಿನ ದೃಶ್ಯಾವಳಿಗಳನ್ನು ನೀವು ಈ ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣದ ವರದಿ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.
ದೇಣಿಗೆ ಕದ್ದವರು ಬಾಬರ್ ವಂಶಸ್ಥರು: ಉದ್ಧವ್
ಉತ್ತರ ಪ್ರದೇಶದ ಆಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಮನ ಹೆಸರಲ್ಲಿ ಲೂಟಿ ಮಾಡುತ್ತಿರುವವರು ಬಾಬರನ ವಂಶಸ್ಥರು ಎಂದು ಆರೋಪಿಸಿದ್ದಾರೆ.
ರಾಮ ಮಂದಿರದ ಹೆಸರಿನಲ್ಲಿ ಲೂಟಿ ಮಾಡುತ್ತಿರುವವರು ಬೇರೆ ಯಾರೂ ಅಲ್ಲ, ಅವರು ಬಾಬರನ ವಂಶಸ್ಥರು ಎಂದು ಕಟುವಾಗಿ ಟೀಕಿಸಿದ್ದಾರೆ.
ವಾಶಿಮ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಓಡಿಹೋಗಿದ್ದ ಬಿಜೆಪಿ, ಈಗ ಮಂದಿರದ ಶ್ರೇಯಸ್ಸು ಪಡೆಯಲು ಅಹಂಕಾರ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರಿಗೆ’ಅವರಿಗೆ ಎಷ್ಟು ದುರಹಂಕಾರ ಬಂದಿದೆ ಎಂದರೆ ಈಗ ರಾಮಮಂದಿರವನ್ನೇ ಲೂಟಿ ಮಾಡಲು ಹೊರಟಿದ್ದಾರೆ. ಅಂದು ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಇವರೆಲ್ಲ ಓಡಿಹೋಗಿದ್ದರು. ಆ ಕೃತ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳಿಕೆ ನೀಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶದ ನಂತರ ಭವ್ಯ ಮಂದಿರ ನಿರ್ಮಾಣವಾಗುತ್ತಿದ್ದಂತೆ, ಕ್ರೆಡಿಟ್ ತೆಗೆದುಕೊಳ್ಳಲು ಎಲ್ಲರೂ ಮುಗಿಬಿದ್ದರು’ ಎಂದು ಲೇವಡಿ ಮಾಡಿದ್ದಾರೆ.
‘ರಾಮ ಮಂದಿರವನ್ನು ಲೂಟಿ ಮಾಡುತ್ತಿರುವವರು ಬಾಬರನ ವಂಶಸ್ಥರಲ್ಲದೆ ಇನ್ಯಾರು ಇದು ಕೇವಲ ಶಿವಸೇನೆಗೆ ಮಾಡಿದ ದ್ರೋಹವಲ್ಲ, ಇಡೀ ಹಿಂದೂ ಸಮಾಜ ಮತ್ತು ಅವರ ಭಾವನೆಗಳಿಗೆ ಎಸಗಿದ ಅಪಚಾರ. ಈ ದ್ರೋಹಿಗಳಿಗೆ ಈ ವಿಷಯವನ್ನು ಸಂಸತ್ತಿನಲ್ಲಿ ಎತ್ತುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ
ಪಕ್ಷದ ಬಂಡಾಯ ನಾಯಕರು ಮತ್ತು ಟೀಕಾಕಾರರ ವಿರುದ್ಧ ಹರಿಹಾಯ್ದ ಠಾಕ್ರೆ, ’ಶಿವಸೇನೆ ಮುಗಿದುಹೋಗಿದೆ, ಉದ್ಧವ್ ಠಾಕ್ರೆ ಇನ್ನು ಮುಂದೆ ಜನರ ಮಧ್ಯೆ ಹೋಗುವುದಿಲ್ಲ ಎಂದು ಕೆಲವರು ನರಿಗಳಂತೆ ಊಳಿಡಲು ಆರಂಭಿಸಿದ್ದಾರೆ. ಆದರೆ ಪಕ್ಷದ ನಿಷ್ಠಾವಂತ ಮತ್ತು ಬದ್ಧತೆಯುಳ್ಳ ಶಿವಸೈನಿಕರು ಎಂದಿಗೂ ಧೃತಿಗೆಟ್ಟಿಲ್ಲ. ಇನ್ನು ಮುಂದೆ ನಮ್ಮಲ್ಲಿ ದ್ರೋಹಕ್ಕೆ ಯಾವುದೇ ಸ್ಥಾನವಿಲ್ಲ’ ಎಂದು ಗುಡುಗಿದ್ದಾರೆ.
ಉದ್ಧವ್ ಠಾಕ್ರೆ ಅವರ ಈ ಆಕ್ರೋಶದ ಮಾತುಗಳು ಅವರ ಪಕ್ಷ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಬೆನ್ನಲ್ಲೇ ಬಂದಿದೆ. ಇತ್ತೀಚೆಗಷ್ಟೇ ಶಿವಸೇನಾ (ಯುಬಿಟಿ) ಪಕ್ಷದ ಆರು ಲೋಕಸಭಾ ಸಂಸದರು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ.






















