
ಬೆಂಗಳೂರು, ಜೂ. ೨೮- “ಆರೋಗ್ಯಕರ ಕುಟುಂಬದಿಂದ ಆರೋಗ್ಯಕರ ರಾಜ್ಯ ಹಾಗೂ ದೇಶ ನಿರ್ಮಾಣ ಸಾಧ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಶಿವಕುಮಾರ್ ಅವರು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ರೂಪಿಸಿದ್ದು, ರಾಜ್ಯದ ಎಲ್ಲಾ ಭಾಗದ ಪೋಷಕರು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಎಂದರು
“ಆರೋಗ್ಯ ಸಚಿವ ಯು ಟಿ ಖಾದರ್ ಅವರು ಬಹಳ ಬುದ್ಧಿವಂತರು. ನನ್ನ ಮೊಮ್ಮಗಳಿಗೆ ಒಂದು ತಿಂಗಳು. ಹೀಗಾಗಿ ಈ ಕಾರ್ಯಕ್ರಮಕ್ಕೆ ನನ್ನ ಮನೆಯನ್ನೇ ಆಯ್ಕೆ ಮಾಡಿದ್ದಾರೆ. ಮುಖ್ಯಮಂತ್ರಿ ಮನೆಯಿಂದ ಈ ಅಭಿಯಾನ ಆರಂಭವಾಗಲಿ ಎಂಬುದು ಖಾದರ್ ಅವರ ಸದಾಶಯ. ಹೀಗಾಗಿ ನನ್ನ ಮನೆಯಲ್ಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದಾರೆ” ಎಂದು ತಿಳಿಸಿದರು.
“ಈ ಕಾರ್ಯಕ್ರಮದಲ್ಲಿ ೩೬,೬೮೬ ಲಸಿಕಾ ಕೇಂದ್ರಗಳು, ೯೮೮ ಸಂಚಾರಿ ಕೇಂದ್ರಗಳು, ೨,೧೨೫ ಪಾಯಿಂಟ್ ಗಳು ಸೇರಿದಂತೆ ಒಟ್ಟು ೧,೧೪,೨೧೩ ಲಸಿಕಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅನೇಕ ಎನ್ ಜಿಓ ಗಳು ಅಭಿಯಾನಕ್ಕೆ ಕೈಜೋಡಿಸಿವೆ. ದೇಶ ಸೇವೆಯ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಎಲ್ಲರಿಗೂ ತುಂಬು ಹೃದಯದಿಂದ ಶುಭ ಕೋರುವೆ” ಎಂದರು.
“೬೦.೮೪ ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ೧೯೭೨ರಲ್ಲಿ ಇಂದಿರಾ ಗಾಂಧಿ ಅವರು ದೇಶದ ಮಕ್ಕಳು ಆರೋಗ್ಯವಾಗಿ ಇರಬೇಕು ಎಂದು ಪೋಲಿಯೋ ಲಸಿಕೆ ಕಾರ್ಯಕ್ರಮ ಮಾಡಿದರು. ರಾಜೀವ್ ಗಾಂಧಿ ಅವರ ಕಾಲದಲ್ಲಿ ಇದು ಅಭಿಯಾನವಾಗಿ ಪ್ರಾರಂಭವಾಯಿತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಭಾರತ ಪೋಲಿಯೋ ಮುಕ್ತ ದೇಶವಾಯಿತು” ಎಂದು ತಿಳಿಸಿದರು.
“ನಮ್ಮ ದೇಶ ಬಲಿಷ್ಠವಾಗಿದೆ. ನೆರೆ ರಾಷ್ಟ್ರಗಳಿಂದ ಮತ್ತೆ ಪೋಲಿಯೋ ಬಾರದಂತೆ ತಡೆಯಲು ನಾವು ಈ ಅಭಿಯಾನ ಮಾಡುತ್ತಿದ್ದೇವೆ. ವಿಶ್ವ ಪೋಲಿಯೋ ಲಸಿಕಾ ದಿನದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಇಂದು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಿ ಯಾವುದೇ ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗಬಾರದು ಎಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದರು.
“ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕೆ ಪ್ರತಿ ಹಂತದಲ್ಲಿ ಕಾರ್ಯಕ್ರಮ ರೂಪಿಸಿದೆ. ನಮ್ಮ ಸರ್ಕಾರೇತರ ಸಂಸ್ಥೆಗಳು, ಅಧಿಕಾರಿಗಳು ಉತ್ತಮ ಸಹಕಾರ ನೀಡುತ್ತಿದ್ದು, ಅವರಿಗೆ ಅಭಿನಂದನೆಗಳು. ಈ ದೇಶವನ್ನು ಪೋಲಿಯೋ ಮುಕ್ತ ಮಾಡಲಾಗಿದೆ. ಖಾದರ್ ಅವರಿಗೆ ಅಪಾರ ಅನುಭವವಿದೆ. ಅವರು ಈ ಜವಾಬ್ದಾರಿ ಹೊತ್ತಿದ್ದಾರೆ. ನಮ್ಮ ರಾಜ್ಯದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಬಲಿಷ್ಠವಾಗಿದ್ದು, ಹೊರಗಿನಿಂದ ಜನರು ಇಲ್ಲಿನ ಹೆಲ್ತ್ ಟೂರಿಸಂಗೆ ಬರುತ್ತಿದ್ದಾರೆ. ಆರೋಗ್ಯ ಸೇವೆಗೆ ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ” ಎಂದು ತಿಳಿಸಿದರು.
“ನಮ್ಮ ರಾಜ್ಯದಲ್ಲಿ ಪ್ರತಿವರ್ಷ ೧೩,೯೪೦ ವೈದ್ಯರನ್ನು ತಯಾರು ಮಾಡುತ್ತೇವೆ. ೧.೦೭ ಲಕ್ಷ ಆರೋಗ್ಯ ಸೇವೆ ಸಿಬ್ಬಂದಿ ತಯಾರು ಮಾಡುತ್ತಿದ್ದೇವೆ. ಇಡೀ ಭಾರತದಲ್ಲಿ ಇಷ್ಟು ಗುಣಮಟ್ಟದ ವೈದ್ಯಕೀಯ ಸೇವೆ ಎಲ್ಲೂ ಇಲ್ಲ. ನಮ್ಮ ರಾಜ್ಯದ ಕಾಲೇಜುಗಳಲ್ಲಿ ಓದಿ ವೈದ್ಯರಾದವರು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತಾವನೆಗಳಿಗೆ ಆದ್ಯತೆ ಮೇರೆಗೆ ಒಪ್ಪಿಗೆ ನೀಡುತ್ತಿದ್ದೇವೆ” ಎಂದು ಹೇಳಿದರು.
























