
ಬೆಂಗಳೂರು, ಜೂ. ೨೮- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೂ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೂಮಿ ಪೂಜೆ ನೆರವೇರಿಸಿದರು.
ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ ಸಿಬ್ಬಂದಿ ವಸತಿಗೃಹಗಳ ವರೆಗೂ ಸುರಂಗ ರಸ್ತೆ ನಿರ್ಮಿಸಲಾಗುತ್ತಿದ್ದು, ಹೆಬ್ಬಾಳ ಜಂಕ್ಷನ್ ಬಳಿ ಈ ಸುರಂಗ ಮಾರ್ಗದ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೂಜೆ ನೆರವೇರಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ. ಜಾರ್ಜ್, ಸಾರಿಗೆ ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ ವರೆಗಿನ ಈ ಸುರಂಗ ಮಾರ್ಗ ಸುಮಾರು ೨.೨ ಕಿ.ಮೀ. ಉದ್ದವಿದ್ದು, ೬ ಪಥಗಳ ರಸ್ತೆಯಾಗಿದೆ. ಒಂದೊಂದು ಪಥಗಳು ೩.೫ ಮೀಟರ್ ಅಗಲವಿದ್ದು, ಒಟ್ಟು ೧೧೩೯ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಬಿಡಿಎಯಿಂದಲೇ ಈ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ.
೧೮ ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಲಿದ್ದು, ಯಾವುದೇ ಖಾಸಗಿ ಜಾಗದ ಸ್ವಾಧೀನವಿಲ್ಲದೆ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರಿಗಾಗಿ ೧ ಲಕ್ಷ ಕೋಟಿ ಯೋಜನೆ
ಬೆಂಗಳೂರು ನಗರದ ಅಭಿವೃದ್ಧಿಗಾಗಿ ೧ ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದೇವೆ. ಬೆಂಗಳೂರಿನ ಜನತೆಗೆ ಏನೆಲ್ಲಾ ಒಳ್ಳೆಯ ಕೆಲಸ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುರಂಗ ಮಾರ್ಗದ ಗುದ್ದಲಿ ಪೂಜೆ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.
ನಾನು ಮುಖ್ಯಮಂತ್ರಿಯಾದ ಮೇಲೆ ೧೦ ಸಾವಿರ ಕೋಟಿ ರೂಪಾಯಿ ಲೂಟಿ ಮಾಡಿದ್ದೇನೆ ಎಂದೆಲ್ಲಾ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಈ ಟೀಕೆಗಳೇ ನನಗೆ ಉನ್ನತ ಕಾರ್ಯಕ್ರಮ ರೂಪಿಸಲು ಮಾರ್ಗದರ್ಶನ ಮಾಡುತ್ತವೆ ಎಂದರು.
ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸ ಮಾಡೋಕೆ ವಿರೋಧ ಪಕ್ಷದ ಸ್ನೇಹಿತರಿಂದ ಆಗಿಲ್ಲ. ಈಗ ಟೀಕೆಗಳನ್ನು ಮಾಡುತ್ತಿದ್ದಾರೆ ಅಷ್ಟೇ ಎಂದರು.
ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೂ ನಿರ್ಮಾಣವಾಗುವ ಸುರಂಗ ಮಾರ್ಗ ಸುಂಕ ರಹಿತ ಮಾರ್ಗವಾಗಿದೆ ಎಂದು ಅವರು ಹೇಳಿದರು.
ವಿಪಕ್ಷಗಳ ವಿರುದ್ದ ಕೆಬಿಜಿ ವಾಗ್ದಾಳಿ
ಇದೇ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ಬೆಂಗಳೂರಿನಲ್ಲಿ ಮುಂದಿನ ೫೦ ವರ್ಷದ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇಂದು ಹೆಬ್ಬಾಳ ಜಂಕ್ಷನ್‌ನಲ್ಲಿ ಸುರಂಗ ಮಾರ್ಗದ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಇದು ಬೆಂಗಳೂರು ಸಂಚಾರ ಸಮಸ್ಯೆಯ ಪರಿಹಾರಕ್ಕೆ ದೂರದೃಷ್ಟಿಯ ಯೋಜನೆಯಾಗಿದೆ. ಸತತ ೨ ವರ್ಷದ ಪ್ರಯತ್ನದ ಫಲ ಇಂದು ಶಂಕುಸ್ಥಾಪನೆಯಾಗಿದೆ. ೧೦ ವರ್ಷದ ಹಿಂದೆಯೇ ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರು ಈ ಯೋಜನೆ ರೂಪಿಸಿದ್ದರು. ಅನೇಕರ ವಿರೋಧದಿಂದ ಯೋಜನೆ ಜಾರಿಯಾಗಿರಲಿಲ್ಲ. ಇಂದು ಕಾರ್ಯರೂಪಕ್ಕೆ ಬಂದಿದೆ ಎಂದರು.
ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರೀಸ್, ಬಿಡಿಎ ಆಯುಕ್ತರು, ಜಿಬಿಎ ಆಯುಕ್ತರು ಎಲ್ಲರೂ ಈ ಯೋಜನೆ ಕಾರ್ಯಸಾಧುವಾಗಲು ಕಾರಣರಾಗಿದ್ದಾರೆ. ೧೦ ವರ್ಷದ ಹಿಂದೆಯೇ ಈ ಯೋಜನೆ ಜಾರಿಯಾಗಿದ್ದರೆ ಸಂಚಾರ ದಟ್ಟಣ ಸಮಸ್ಯೆ ಪರಿಹಾರವಾಗುತ್ತಿತ್ತು. ಅಭಿವೃದ್ಧಿ ವಿರೋಧಿಗಳ ಕುತಂತ್ರದಿಂದ ಇಷ್ಟು ವರ್ಷ ಕಾಯಬೇಕಾಯಿತು ಎಂದರು.
ವಿರೋಧ ಪಕ್ಷಗಳು ಅಭಿವೃದ್ಧಿ ಯೋಜನೆಗೂ ವಿರೋಧ ಮಾಡುತ್ತವೆ. ಅವರುಗಳ ಯೋಗ್ಯತೆಗೆ ಒಂದು ಅಭಿವೃದ್ಧಿ ಯೋಜನೆಗೆ ಇಟ್ಟಿಗೆ ಕಲ್ಲು ಇಡಲು ಆಗಲಿಲ್ಲ ಎಂದು ಅವರು ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.
ಈ ಸುರಂಗ ಮಾರ್ಗ ಭವಿಷ್ಯದ ನಗರ ನಿರ್ಮಾಣಕ್ಕೆ ಸಹಕಾರವಾಗಲಿದೆ ಎಂದು ಅವರು ಹೇಳಿದರು.
























