Home ಜಿಲ್ಲೆ ಕಲಬುರಗಿ ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭ

ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭ

ಕಲಬುರಗಿ,ಜೂ 28: ನಗರದ ಕುಸನೂರ ರಸ್ತೆ, ತಿಲಕ್ ನಗರದ ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆ ( ಸಿಬಿಎಸ್‍ಸಿ)ಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ಮತ್ತು ಸಹ-ಪಠ್ಯ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಧ್ವಜಾರೋಹಣ ನೆರವೇರಿಸಿ, ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡಾ.ಸುಧಾ ಆರ್. ಹಾಲಕಾಯಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಹೆಚ್.ಕೆ.ಇ.ಎಸ್. ಸಂಸ್ಥೆಯ ಜಂಟಿ ಕಾರ್ಯದರ್ಶಿ ಮತ್ತು ಎಸ್.ಬಿ.ಪಾಟೀಲ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಕೈಲಾಸ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
“ಅಧಿಕಾರ ಸ್ವೀಕಾರ ಸಮಾರಂಭ”ದಲ್ಲಿ ಡಾ.ಸುಧಾ ಆರ್. ಹಾಲಕಾಯಿ ಅವರು ಮತ್ತು ಡಾ. ಕೈಲಾಸ ಪಾಟೀಲ ಅವರು ಮಕ್ಕಳಿಗೆ ಬ್ಯಾಚ್‍ಗಳನ್ನು ವಿತರಿಸಿ, ಬಾವುಟಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯುತವಾದ ಪದವಿ ಗ್ರಹಣ ಮಾಡಿದರು.
ಡಾ.ಸುಧಾ ಆರ್. ಹಾಲಕಾಯಿ ಅವರು ಜನನಿ ಮತ್ತು ಜನ್ಮಭೂಮಿಗೆ ನಮ್ಮ ಋಣ ಯಾವಾಗಲೂ ಇರುತ್ತೆ. ನಾವು ಏನೇ ಮಾಡಿದರೂ ತಲೆ ಎತ್ತಿ ನಿಲ್ಲುವ, ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಬೇಕು. ಮಕ್ಕಳ ವಿಕಾಸವು ಬಾಲ್ಯವನ್ನು ಅವಲಂಬಿಸಿರುತ್ತದೆ. ತಂದೆ-ತಾಯಂದಿರು ದೇಶದ ಪ್ರತಿ ಒಳ್ಳೆಯ ಜವಾಬ್ದಾರಿಯುತ ಗುಣಗಳನ್ನು ಮಕ್ಕಳಲ್ಲಿ ಅಳವಡಿಸಬೇಕು. ಜೀವನದಲ್ಲಿ ಗುರಿ ಇರಬೇಕು ಮತ್ತು ಆ ಗುರಿ ಸಾಧನೆಗೆ ಗುರು ಇರಬೇಕು. ಅಂತಹ ಸುಂದರ ವಾತಾವರಣವನ್ನು ಮಕ್ಕಳು ಈ ಶಾಲೆಯಲ್ಲಿ ಹೊಂದಿದ್ದು, ಉತ್ತಮ ಆಡಳಿತ ಮಂಡಳಿ, ಉತ್ತಮ ಪ್ರಾಂಶುಪಾಲರು ಹಾಗೂ ಒಳ್ಳೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಪಾಲಕರಿಗೆ, ಶಾಲೆಗೆ ಮತ್ತು ದೇಶಕ್ಕೆ ಕೀರ್ತಿ ತರುವಂತಹ ಹೂಗಳಾಗಿ ಅರಳಬೇಕೆಂದರು. ನರೇಂದ್ರ ಮೋದಿಯವರ ಆದರ್ಶಗಳನ್ನು ಮತ್ತು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಮಕ್ಕಳು ಮೊಬೈಲ್ ಬಳಕೆ ನಿಷೇಧಿಸಬೇಕು, ಬೇರೆಯವರ ನೋಡಿ ಅಸೂಯೆ ಮತ್ತು ಹೋಲಿಕೆ ಮಾಡಬಾರದೆಂದರು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವಿದ್ದು, ಇತರರಿಗೆ ಸ್ಫೂರ್ತಿಯಾಗಬೇಕು. ನಮ್ಮ ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ಕೊಟ್ಟಿದ್ದು, ಅದಕ್ಕೆ ಬದ್ಧರಾಗಿ ನಾವು ಸಂವಿಧಾನದ ನಿಯಮಗಳನ್ನು ಮತ್ತು ತತ್ವಗಳನ್ನು ಅನುಸರಿಸಬೇಕೆಂದರು. ಏನೇ ಮಾಡಿದರೂ ದೇಶದಲ್ಲಿ ನೆನಪುಳಿಯುವಂತಹ ಕೆಲಸ ಮಾಡಬೇಕೆಂದು ಬಹಳ ಅತ್ಯುತ್ತಮ ವಾಕ್ ಚಾತುರ್ಯದಿಂದ ಮಕ್ಕಳಲ್ಲಿ ದೇಶಾಭಿಮಾನದ ಬಗ್ಗೆ ಜಾಗೃತಿ ಮೂಡಿಸಿದರು.
ಪ್ರಾಂಶುಪಾಲ ಕಿರಣ ಕುಮಾರ ಕುಲಕರ್ಣಿ ಅವರು “ಅಧಿಕಾರ ಸ್ವೀಕಾರ ಸಮಾರಂಭ”ವು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಶಾಲಾ ಸಮುದಾಯದಲ್ಲಿ ಏಕತೆ ಮತ್ತು ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆಂದು ಹೇಳಿದರು. ಮಕ್ಕಳು ಶಿಸ್ತು, ನಿಷ್ಠೆ ಮತ್ತು ಸಮಯಕ್ಕೆ ಮುಖ್ಯ ಪ್ರಾಮುಖ್ಯತೆ ನೀಡಬೇಕೆಂದರು. ಮಕ್ಕಳಲ್ಲಿ ನಾಯಕರುಗಳ ಕುರಿತಾದ ಜ್ಞಾನದ ಜೊತೆಗೆ, ನಮ್ಮ ಮೂಲ ಭಾಷೆ, ಸಂಸ್ಕøತಿ ಮತ್ತು ನಾವು ಯಾರು ಎಂಬುದರ ಬಗ್ಗೆ ಹೆಮ್ಮೆ ಇರಬೇಕು. ಶಾಲೆಯಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ದೇಶದ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕೆಂದರು. ವಿದ್ಯಾರ್ಥಿಗಳು ನೃತ್ಯದ ಮೂಲಕ ವಿವಿಧ ಯೋಗಾಸನಗಳನ್ನು ಪ್ರಸ್ತುತ ಪಡಿಸಿದರು. ಇದರೊಂದಿಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಆರಂಭವನ್ನು ನೃತ್ಯದ ಮೂಲಕ ಪ್ರಾರಂಭಿಸಲಾಯಿತು.ಪ್ರಾಂಶುಪಾಲ ಕಿರಣಕುಮಾರ ಕುಲಕರ್ಣಿ ಅವರು, ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.