
ಕಲಬುರಗಿ,ಅ.3: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಶುಕ್ರವಾರ ವಿ.ವಿ.ಯ ಸಭಾಂಗಣದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ 157ನೇ ಗಾಂಧಿ ಜಯಂತಿ ಹಾಗೂ 122ನೇ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ ಮತ್ತು ಸತ್ಯಾಗ್ರಹದಂತಹ ಆದರ್ಶಗಳು ಹಾಗೂ ತತ್ವಗಳು ಸಮಕಾಲೀನ ಜಗತ್ತಿನಲ್ಲಿಯೂ ಅತ್ಯಂತ ಆಳವಾಗಿ ಪ್ರಸ್ತುತವಾಗಿವೆ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನ, ಮನೆಮನೆಗೆ ಶೌಚಾಲಯ ಸೌಲಭ್ಯ, ಗ್ರಾಮ ಸ್ವರಾಜ್ಯ ಪರಿಕಲ್ಪನೆ, ಜಲ ಜೀವನ್ ಮಿಷನ್, ಜನಧನ್ ಯೋಜನೆ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಯುವ ಸಬಲೀಕರಣ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಉಪಕ್ರಮಗಳು ಎಲ್ಲರನ್ನೂ ಒಳಗೊಂಡ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣದ ದೃಷ್ಟಿಕೋನವು ಗಾಂಧಿಜೀಯವರ ಚಿಂತನೆಗಳೆ ಕಾರ್ಯರೂಪದಲ್ಲಿ ಜಾರಿಗೊಂಡಿವೆ ಎಂದು ಅವರು ತಿಳಿಸಿದರು.
ಯುವ ಪೀಳಿಗೆಯು ಗಾಂಧೀಜಿಯವರ ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಕುಲಪತಿಗಳು, ಸತ್ಯ ಮತ್ತು ಅಹಿಂಸೆಯ ಮಾರ್ಗವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಯವರ “ಜೈ ಜವಾನ್, ಜೈ ಕಿಸಾನ್” ಘೋಷಣೆಯನ್ನು ಸ್ಮರಿಸಿದರು. ಬಳಿಕ “ಜೈ ವಿಜ್ಞಾನ” ಹಾಗೂ “ಜೈ ಅನುಸಂಧಾನ” ಘೋಷಣೆಗಳು ಸೇರ್ಪಡೆಯಾದುದನ್ನು ಉಲ್ಲೇಖಿಸಿದರು. ಸಂಘರ್ಷ ಮತ್ತು ಸಾಮಾಜಿಕ ಸವಾಲುಗಳ ಪರಿಹಾರಕ್ಕೆ ಗಾಂಧೀಜಿಯವರ ಅಹಿಂಸೆ ಹಾಗೂ ಶಾಂತಿಯುತ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಸಿಯುಕೆಯ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೆÇ್ರ. ವೆಂಕಟ್ ರಾವ್ ಎಂ. ಪಲಾಟಿ ಅವರು, “ಗಾಂಧೀಜಿ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ; ಅವರು ಒಂದು ವಿಚಾರವಾಗಿದ್ದರು” ಎಂದು ಹೇಳಿದರು. ಗಾಂಧೀಜಿ ಸಾಮಾನ್ಯ ಜನರಿಗೆ ಸ್ಫೂರ್ತಿ ನೀಡಿದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಚಳುವಳಿಯನ್ನಾಗಿ ಪರಿವರ್ತಿಸಿದರು ಎಂದು ಅವರು ತಿಳಿಸಿದರು.
ದಕ್ಷಿಣ ಆಫ್ರಿಕಾದಲ್ಲಿನ ಅನುಭವಗಳಿಂದ ಹಿಡಿದು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿನ ನಾಯಕತ್ವದವರೆಗಿನ ಗಾಂಧೀಜಿಯವರ ಪಯಣವನ್ನು ಪೆÇ್ರ. ಪಲಾಟಿ ಅವರು ವಿವರಿಸಿದರು. ವರ್ಣಭೇದ ಮತ್ತು ಅನ್ಯಾಯದ ವಿರುದ್ಧ ಗಾಂಧೀಜಿಯವರ ಹೋರಾಟ, ಹಾಗೂ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಾಗಿ ಅವರು ಬಳಸಿದ ಸತ್ಯ, ಅಹಿಂಸೆ, ಸತ್ಯಾಗ್ರಹ, ಸ್ವದೇಶಿ ಮತ್ತು ‘ಕ್ವಿಟ್ ಇಂಡಿಯಾ’ (ಭಾರತ ಬಿಟ್ಟು ತೊಲಗಿ) ಚಳುವಳಿಗಳ ಕುರಿತು ಅವರು ವಿವರಿಸಿದರು.
ಗಾಂಧೀಜಿಯವರ ಕೊಡುಗೆಯು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿರದೆ, ಸಾಮಾಜಿಕ ಸುಧಾರಣೆ, ಶಿಕ್ಷಣ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಏಳಿಗೆ ಮತ್ತು ಸಾಮಾಜಿಕ ಸಮಾನತೆಯ ಉತ್ತೇಜನದವರೆಗೂ ವಿಸ್ತರಿಸಿತ್ತು ಎಂದು ಅವರು ಹೇಳಿದರು. ಯುವಜನರು ಗಾಂಧೀಜಿಯವರ ಚಿಂತನೆಗಳನ್ನು ಅರ್ಥಮಾಡಿಕೊಂಡು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಮಾತನಾಡಿ, ಗಾಂಧೀಜಿಯವರ ತತ್ವಚಿಂತನೆಗಳು-ವಿಶೇಷವಾಗಿ ಅಹಿಂಸೆ, ಗ್ರಾಮ ಸ್ವರಾಜ್, ಸ್ವದೇಶಿ, ಸಾಮಾಜಿಕ ಸಮಾನತೆ ಮತ್ತು ಅಂತ್ಯೋದಯ-ಇಂದಿಗೂ ಜಗತ್ತಿನಾದ್ಯಂತ ಪ್ರಸ್ತುತತೆಯನ್ನು ಹೊಂದಿವೆ ಎಂದು ಹೇಳಿದರು. ಗ್ರಾಮ ಸ್ವರಾಜ್ ಪರಿಕಲ್ಪನೆಯು ಹಳ್ಳಿಗಳು ಮತ್ತು ಸ್ಥಳೀಯ ಆರ್ಥಿಕತೆಗಳನ್ನು ಬಲಪಡಿಸಲು ಒತ್ತು ನೀಡಿದರೆ, ಸ್ವದೇಶಿ ಚಳುವಳಿಯು ಸ್ಥಳೀಯ ಉತ್ಪಾದನೆ ಮತ್ತು ಸ್ಥಳೀಯ ಮಾರುಕಟ್ಟೆಗಳನ್ನು ಉತ್ತೇಜಿಸಿತು ಎಂದು ವಿವರಿಸಿದರು.
ಸಾಮಾಜಿಕ ಸಮಾನತೆ, ಗ್ರಾಮ ಸ್ವರಾಜ್ಯ, ಸ್ವಾವಲಂಬನೆ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಅವಕಾಶ ಮತ್ತು ಫಲಗಳು ತಲುಪಬೇಕು ಎಂಬ ಗಾಂಧೀಜಿಯವರ ಆಶಯಗಳು ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ದ ವಿಶಾಲ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತವೆ ಎಂದು ಅವರು ಹೇಳಿದರು. ಗಾಂಧೀಜಿಯವರ ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ವಿಶ್ವವಿದ್ಯಾಲಯ ಸಮುದಾಯಕ್ಕೆ ಕರೆ ನೀಡಿದರು.
‘ಸ್ವಚ್ಛತಾ ಹೀ ಸೇವಾ’ ಉಪಕ್ರಮಗಳ ಭಾಗವಾಗಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪೆÇೀಸ್ಟರ್ ರಚನೆ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದ ಸಂಯೋಜಕ ಡಾ. ಹರೀಶ್ ಚೌಧರಿ ಸ್ವಾಗತ ಭಾಷಣ ಮಾಡಿದರು. ಡಾ. ನೃಸಿಂಹ ಚರಣ್ ಪ್ರಧಾನ್ ವಂದನಾರ್ಪಣೆ ಸಲ್ಲಿಸಿದರು. ಸಂಗೀತ ಮತ್ತು ಲಲಿತಕಲೆಗಳ ವಿಭಾಗದ ವಿದ್ಯಾರ್ಥಿಗಳು ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿದರು.
ಪೆÇ್ರ. ಬಸವರಾಜ ಎಂ. ಕುಬಕಡ್ಡಿ, ಪೆÇ್ರ. ಪಲ್ಲೆಪೆÇೀಗು ರಾಘವಯ್ಯ, ಪೆÇ್ರ. ಪಾಂಡುರಂಗ ಪಟ್ಟಿ, ಪೆÇ್ರ. ರಾಜೀವ್ ಜೋಶಿ, ಡಾ. ಕೋಟ ಸಾಯಿಕೃಷ್ಣ, ಡಾ. ರವಿ ಕಾಂಗೈ, ಪೆÇ್ರ. ಅಮರೇಂದ್ರ ಮಾಸ್ತ, ಪೆÇ್ರ. ಚಿಂತಲಪುಡಿ ವಿ. ಸುರೇಶ್, ಡಾ. ತೇಜಸ್ವಿ ಲಕ್ಕುಂಡಿ, ಡಾ. ಕರಬಸವೆಗೌಡ, ಡಾ. ಲಕ್ಷ್ಮಣ್, ಡಾ. ಬಸವರಾಜ್, ಡಾ. ಬಾಬು ನಲ್ಲಸ್ವಾಮಿ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





















