
ಹುಳಿಯಾರು, ಆ. ೧- ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಗೆ ದಾರಿಯಾಗಿದೆ. ಕೃಷಿಕರು ಕೂಡ ಕೃಷಿಯಲ್ಲಿ ಡಿಜಿಟಲೀಕರಣ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಶ್ರೇಯೋಭಿವೃದ್ಧಿ ಹೊಂದಬೇಕು ಎಂದು ’ಸಿರಿ’ ರೈತೋತ್ಪಾದಕ ಕಂಪನಿಯ ಸಿಇಒ ಜಯರಾಮ್ ಹೇಳಿದರು.
ಪಟ್ಟಣಕ್ಕೆ ಸಮೀಪವಿರುವ ಹೊಸಗೊಲ್ಲರಹಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ “ಮಾಹಿತಿ ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ” ವಿಷಯ ಕುರಿತ ’ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಮೊಬೈಲ್ ಹಾಗೂ ಆನ್‌ಲೈನ್ ಮೂಲಕ ಬೆಳೆಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಡಿಜಿಟಲ್ ಸೇವೆಗಳನ್ನು ಸುಲಭವಾಗಿ ಬಳಸಿಕೊಳ್ಳಬೇಕು. ರೈತೋತ್ಪಾದಕ ಕಂಪನಿಗಳ ಮೂಲಕ ಬೆಳೆಗಳಿಗೆ ನಿಗದಿತ ಬೆಲೆ ನೀಡಿ, ಸಂಸ್ಕರಣೆ ಮಾಡಿ ಮರು ಮಾರಾಟ ಮಾಡುವ ವ್ಯವಸ್ಥೆ ಇದೆ. ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಿವಿಧ ತರಬೇತಿಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ’ಕಲ್ಪಮಿತ್ರ ರೈತೋತ್ಪಾದಕ ಕಂಪನಿಯ ಸಿಇಒ ಗಿರೀಶ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆಯು ರೈತರಿಗೆ ನೇರ ಮಾರುಕಟ್ಟೆ ಸಂಪರ್ಕ, ಆನ್‌ಲೈನ್ ಬೆಲೆ ಮಾಹಿತಿ ಮತ್ತು ಪಾರದರ್ಶಕ ವ್ಯಾಪಾರಕ್ಕೆ ವೇದಿಕೆ ಕಲ್ಪಿಸುತ್ತದೆ. ರೈತರು ಮೊಬೈಲ್ ಮೂಲಕ ’ರೈತ ಬೆಳೆ ಸಮೀಕ್ಷೆ ಆಪ್‌ಗಳನ್ನು ಬಳಸಿಕೊಳ್ಳುವ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಸಂದರ್ಭಗಳಲ್ಲಿ ಧಾನ್ಯ ಸಂಗ್ರಹಾಗಾರ, ವೇರ್‌ಹೌಸ್ ಹಾಗೂ ಶೀತಲೀಕರಣ ಘಟಕಗಳನ್ನು ಬಳಸಿಕೊಳ್ಳುವ ಕುರಿತು ರೈತರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ಮಂಜುನಾಥ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನಾರಾಯಣಪ್ಪ, ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಸೇವಾಪ್ರತಿನಿಧಿ ಲೋಕಮ್ಮ, ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


































