Home ಜಿಲ್ಲೆ ತುಮಕೂರು ಶಿಕ್ಷಣ ಕಲಿತರೆ ಉತ್ತಮ ಜೀವನ: ಸುರೇಶ್‌ಬಾಬು

ಶಿಕ್ಷಣ ಕಲಿತರೆ ಉತ್ತಮ ಜೀವನ: ಸುರೇಶ್‌ಬಾಬು

ಚಿಕ್ಕನಾಯಕನಹಳ್ಳಿ, ಜೂ. ೨- ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಸರ್ಕಾರಿ ಕಾಲೇಜಿನ ಸಮಗ್ರ ಅಭಿವೃದ್ಧಿ ಗಾಗಿ ಸಂಪೂರ್ಣ ಸಹಕಾರವಿದ್ದು ಕುಡಿಯುವ ನೀರಿಗಾಗಿ ಬೋರ್‌ವೆಲ್ ಹಾಗೂ ರಕ್ಷಣೆಗೆ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷಹಾಗೂ ಶಾಸಕ ಸುರೇಶ್‌ಬಾಬು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೫-೨೬ ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್. ಯುವ ರೆಡ್ ಕ್ರಾಸ್ ರೋವರ್ಸ್ ಅಂಡ್ ರೇಂಜರ್ಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಕಾಲೇಜಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮವಾಗಿ ಅಧ್ಯಯನ ಮಾಡಿ ಇದರೊಂದಿಗೆ ನಿಮ್ಮಲ್ಲಿರುವಂಥ ಪ್ರತಿಭೆಯನ್ನು ವಿಶಿಷ್ಟವಾಗಿರುವುದನ್ನು ಹೊರ ಹಾಕುವ ಮೂಲಕ ನಿಮ್ಮ ಸಾಧನೆ ತೋರಿಸಿ, ಶ್ರದ್ದೆ, ಪ್ರಾಮಾಣಿಕತೆಯೊಂದಿಗೆ ಗುರಿ ಇಟ್ಟುಕೊಂಡು ನಿಮ್ಮ ಪೋಷಕರ ಆಸೆಯಂತೆ ನಿಮ್ಮ ಜೀವನ ರೂಪಿಸಿಕೊಳ್ಳಿ. ಕಾಲೇಜಿಗೆ ಅವಶ್ಯಕತೆ ಇರುವಂತ ೩೦ ಕಂಪ್ಯೂಟರ್‌ಗಳನ್ನು ಕೊಡಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಾಸ್ಯಕಲಾವಿದ ಮಿಮಿಕ್ರಿ ಗೋಪಿ ಮಾತನಾಡಿ, ಈಗಿನ ನಿಮ್ಮ ವಯಸ್ಸಿನಲ್ಲಿ ಸಾಧನೆಗೆ ಅವಕಾಶವಿದೆ. ನೀವು ಈಗಾಗಲೇ ಎರಡು ಡೆಂಜರ್ ಝೂನ್ ಮುಗಿಸಿ ಪದವಿಗೆ ಬಂದಿದ್ದೀರಿ ಈಗ ನೀವು ನಿಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಿ. ವ್ಯರ್ಥವಾಗಿ ಸಮಯವನ್ನು ಹಾಳು ಮಾಡದೇ ಉತ್ತಮ ಸ್ನೇಹದಿಂದ ನಿಮ್ಮ ಪೋಷಕರು ನಿಮ್ಮ ಮೇಲಿಟ್ಟಿರುವಂತಹ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ತಿಳಿಸಿ ವಿವಿಧ ಚಲನ ಚಿತ್ರನಟರ ಹಾಗೂ ರಾಜಕಾರಣಿಗಳ ಮಿಮಿಕ್ರಿಯನ್ನು ಮಾಡಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.


ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜ್ಯೋತಿ ಎಂ.ಜೆ ಮಾತನಾಡಿ, ಕಾಲೇಜಿನ ಅಭಿವೃದ್ದಿಗಾಗಿ ನಮ್ಮ ಸಮಿತಿಯ ಅದ್ಯಕ್ಷರಾದ ಶಾಸಕರು ನಮ್ಮ ಎಲ್ಲ ಮನವಿಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಅದರಂತೆ ಮಕ್ಕಳು ಉತ್ತಮ ಅದ್ಯಯನ ಮಾಡುವ ಮೂಲಕ ಕಾಲೇಜಿಗೆ ಹಾಗೂ ನಿಮ್ಮ ಪೋಷಕರಿಗೆ ಕೀರ್ತಿ ತರಬೇಕು ಎಂದರು.


ಕಾಲೇಜಿನ ವರದಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ೮ ಚಿನ್ನದ ಪದಕ, ೬ ಬೆಳ್ಳಿ ಪದಕ, ೭ ಕಂಚಿನ ಪದಕಗಳೊಂದಿಗೆ ಅನೇಕ ಅಂತರ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ, ರಾಷ್ಟ್ರದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಅದರಂತೆ ಎಂ.ಎಸ್,ಡಬ್ಲ್ಯೂ ವಿಭಾಗದಲ್ಲಿ ೫ ರ?ಯಾಂಕ್ ಪಡೆದಿದ್ದಾರೆ, ಇದರೊಂದಿಗೆ ಸಾಂಸ್ಕೃತಿಕ ವಿಭಾಗದಲ್ಲೂ ಯುವಜನ ಮೇಳದಲ್ಲಿ ಭಾಗವಹಿಸುವ ಮೂಲಕ ಸೋಮನಕುಣಿತ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ ಎಂಬ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಮಚಂದ್ರಯ್ಯ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಶಿವಣ್ಣ, ರಮೇಶ್, ಸಂಗೀತ ಸಂಯೋಜಕ ಸಂಜಯ್ ಶ್ರೀವತ್ಸ, ಕಾರ್ಯಕ್ರಮದ ಸಂಚಾಲಕ ನಾಗರಾಜಕುಮಾರ್, ಕ್ರೀಡಾ ಸಂಚಾಲಕ ಡಾ.ಶೈಲೇಂದ್ರಕುಮಾರ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ತಿಮ್ಮೇಗೌಡ, ಸುಧಾರಾಣಿ, ನಾಗರಾಜು ಬಿ.ಜಿ. ಮತ್ತಿತರರು ಭಾಗವಹಿಸಿದ್ದರು.