
ನವದೆಹಲಿ,ಆ.೨೨-ಜಾತಿ ಆಧಾರಿತ ಮೀಸಲಾತಿ ಪದ್ಧತಿಯನ್ನು ವಿರೋಧಿಸಿ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಾಮಾನ್ಯ ವರ್ಗದ (ಅನಾರಕ್ಷಿತ) ಪ್ರಮುಖ ನಾಯಕರು ಮತ್ತು ಯುವಕರು ದೆಹಲಿಯ ಜಂತರ್ ಮಂತರ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಮೀಸಲಾತಿ ಸೌಲಭ್ಯಗಳನ್ನು ಜಾತಿ ಆಧಾರದ ಮೇಲಲ್ಲದೆ, ಬಡತನ ಮತ್ತು ಆರ್ಥಿಕ ಸ್ಥಿತಿಗತಿಯನ್ನಷ್ಟೇ ಮಾನದಂಡವಾಗಿಟ್ಟುಕೊಂಡು ನೀಡಬೇಕು ಎಂದು ಧರಣಿನಿರತರು ಸರ್ಕಾರದ ಮುಂದೆ ಒತ್ತಾಯಿಸಿದ್ದಾರೆ.
ಆರ್ಥಿಕ ಆಧಾರದ ಮೇಲೆ ಮೀಸಲಾತಿ: ಸರ್ಕಾರಿ ಸೌಲಭ್ಯಗಳು, ಶಿಕ್ಷಣ, ತರಬೇತಿ ಮತ್ತು ಶುಲ್ಕ ವಿನಾಯಿತಿಗಳನ್ನು ಕೇವಲ ಜಾತಿಯನ್ನೇ ಮೂಲವಾಗಿಟ್ಟುಕೊಂಡು ನೀಡುವುದನ್ನು ನಿಲ್ಲಿಸಬೇಕು. ನಿಜವಾದ ಬಡವರಿಗೆ ಆರ್ಥಿಕ ಸಹಾಯ ತಲುಪುವಂತಾಗಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.
ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಕಾಯ್ದೆಯು ದುರುಪಯೋಗವಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಅಥವಾ ಸೂಕ್ತ ತಿದ್ದುಪಡಿ ತರಬೇಕು ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ. ಯುಜಿಸಿ ನಿಯಮಾವಳಿಗಳಿಗೆ ವಿರೋಧ: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಇತ್ತೀಚಿನ ಸಮಾನತೆ ನಿಯಮಾವಳಿಗಳಿಗೆ ವಿರೋಧ ವ್ಯಕ್ತಪಡಿಸಲಾಯಿತು.
‘ಕ್ರೀಮಿ ಲೇಯರ್’ ಜಾರಿ: ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ವರ್ಗಗಳಲ್ಲಿ ಆರ್ಥಿಕವಾಗಿ ಸಬಲರಾಗಿರುವವರಿಗೆ ‘ಕ್ರೀಮಿ ಲೇಯರ್’ ಮಾನದಂಡವನ್ನು ಅನ್ವಯಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು. ನೆಟ್‌ವರ್ಕಿಂಗ್ ಮತ್ತು ಪ್ರತಿಭಟನೆಯ ಸ್ವರೂಪ:ನೀಟ್ ಅಭ್ಯರ್ಥಿ ಹರ್ಷ ದುಬೆ ಅವರ ‘ರಿಸರ್ವೇಶನ್ ರಿಫಾರ್ಮ್ ಆಂದೋಲನ’ ಕರೆಗೆ ಬೆಂಬಲ ಸೂಚಿಸಿ ರಾಜಸ್ಥಾನದ ಜನರಲ್ ಸೇನಾ, ಚಾಣಕ್ಯ ಸೇನಾ ಹಾಗೂ ಕರ್ಣಿ ಸೇನಾ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಪ್ರಭಾವಿ ಸೋಶಿಯಲ್ ಮೀಡಿಯಾ ವ್ಯಕ್ತಿ ಅಜೀತ್ ಭಾರತಿ ಸೇರಿದಂತೆ ಸಾವಿರಾರು ಯುವಕರು ಕೇಸರಿ ಧ್ವಜ ಹಾಗೂ ಬ್ಯಾನರ್‌ಗಳನ್ನು ಹಿಡಿದು ಶಾಂತಿಯುತವಾಗಿ ಘೋಷಣೆಗಳನ್ನು ಕೂಗಿದರು.ಪೊಲೀಸ್ ಕಾರ್ಯಾಚರಣೆ ಹಾಗೂ ಬಂಧನ:ಜಂತರ್ ಮಂತರ್ ಸುತ್ತಲೂ ಮುನ್ನೆಚ್ಚರಿಕಾ ಕ್ರಮವಾಗಿ ನವದೆಹಲಿ ಪೊಲೀಸರು ಹಾಗೂ ರ?ಯಾಪಿಡ್ ಆಕ್ಷನ್ ಫೋರ್ಸ್ ಪಡೆಗಳನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಜಂತರ್ ಮಂತರ್‌ನಲ್ಲಿ ಧರಣಿಗೆ ಯಾವುದೇ ಅನುಮತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ ಪೊಲೀಸರು, ಸಂಜೆ ವೇಳೆಗೆ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ರಾಮಲೀಲಾ ಮೈದಾನದಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲು ಮಾತ್ರ ಎನ್‌ಒಸಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


































