
ಕಲಬುರಗಿ,ಜು 24: ರಾಜ್ಯದ ಪ್ರಥಮ ದರ್ಜೆ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರ ಹುದ್ದೆಗೆ ನಕಲಿ ಪಿ ಎಚ್ ಡಿ ಪ್ರಮಾಣ ಪತ್ರ ಸಲ್ಲಿಸಿ ನೇಮಕಾತಿಯಾದ ಉಪನ್ಯಾಸಕರು ತಮ್ಮ ಪವಿತ್ರವಾದ ವೃತ್ತಿಗೆ ದ್ರೋಹ ಬಗೆದಿದ್ದಾರೆ, ಇಂತಹ ಉಪನ್ಯಾಸಕರು ಮಕ್ಕಳ ಭವಿಷ್ಯ ಯಾವ ರೀತಿ ರೂಪಿಸಬಹುದು ಎಂದು ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ ಖಂಡಿಸಿದ್ದಾರೆ.
ನಕಲಿ ಉಪನ್ಯಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹುಡುತ್ತಿರುವುದು ಸ್ವಾಗತಾರ್ಹ. ಆದರೆ ಪಿ ಎಚ್ ಡಿ ಪ್ರಮಾಣ ಪತ್ರ ನೀಡಿದ ವಿಶ್ವವಿದ್ಯಾಲಯ ವಿರುದ್ದ ಕ್ರಮವೇನು? ಎಷ್ಟು ದಿನದಿಂದ, ಎಷ್ಟು ಜನರಿಗೆ ನಕಲಿ ಪ್ರಮಾಣ ಪತ್ರ ನೀಡಿವೆ ಎಂದು ಸಮಗ್ರವಾಗಿ ತನಿಖೆ ಮಾಡಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯದ ಪ್ರದೇಶವಾರು ನಕಲಿ ಪ್ರಮಾಣ ಪಡೆದವರಲ್ಲಿ ಕಲಬುರಗಿ ವಿಭಾಗದವರು ಅತಿ ಹೆಚ್ಚು ಅಂದರೆ 154 ಜನ ನಕಲಿ ಪ್ರಮಾಣ ಪತ್ರ ಪಡೆದಿರುವದು ವಿಷಾಧಕರ ಸಂಗತಿ. ಇಂತಹ ಸಂದರ್ಭದಲ್ಲಿ ಗುಣ ಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ? ಮೊದಲು ನಕಲಿ ಪ್ರಮಾಣ ಪತ್ರ ನೀಡುವ ವಿಶ್ವವಿದ್ಯಾಲಯಗಳು ಯಾವುದೇ ರಾಜ್ಯದಲ್ಲಿರಲಿ ಅವುಗಳ ವಿರುದ್ದ ತನಿಖೆ ಮಾಡಿ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಪುನಃ ಇಂತಹ ಘಟನೆ ಯಾಗದಂತೆ ಕ್ರಮಕೈಗೊಳ್ಳಲಿ ಎಂದು ಅಟ್ಟೂರ ಒತ್ತಾಯಿಸಿದ್ದಾರೆ.































