
ಬೆಂಗಳೂರು,ಜು೫:ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವೇಗವಾಗಿ ರೂಪಾಂತರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆ, ಕೌಶಲ್ಯ ವೃದ್ಧಿ ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆಕ್ಸೆಂಚರ್ ಲರ್ನ್‌ವೆಂಟೇಜ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗ್ಲೋಬಲ್ ಲೀಡ್ ಕಿಶೋರ್ ಪಿ. ದುರ್ಗ್ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೨೦೨೬?೩೦ನೇ ಸಾಲಿನ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ತಾಂತ್ರಿಕ ಬದಲಾವಣೆಗಳು ಐದರಿಂದ ಹತ್ತು ವರ್ಷಗಳಿಗೊಮ್ಮೆ ಆಗುತ್ತಿದ್ದರೆ, ಈಗ ವಾರಗಳು ಅಥವಾ ದಿನಗಳ ಅಂತರದಲ್ಲೇ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಆದ್ದರಿಂದ ಬದಲಾವಣೆಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಎರಡನೇ ದಿನ ಮಾತನಾಡಿದ ಕರ್ನಾಟಕ ಹೈಬ್ರಿಡ್ ಮೈಕ್ರೋ ಡಿವೈಸಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ, ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ಇ. ದ್ವಾರಕದಾಸ, ಯಶಸ್ಸು ಎಂದರೆ ಕೇವಲ ಆರ್ಥಿಕ ಸಂಪತ್ತಲ್ಲ; ಉತ್ತಮ ಹೆಸರು ಗಳಿಸಿ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ೧,೪೦೦ಕ್ಕೂ ಹೆಚ್ಚು ನೂತನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು. ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ. ಜೆ. ಸುಧೀರ್ ರೆಡ್ಡಿ ಸಂಸ್ಥೆಯ ಉದ್ಯಮ ಸಹಯೋಗಿತ ಪ್ರಯೋಗಾಲಯಗಳು, ಅಂತರರಾಷ್ಟ್ರೀಯ ಸಹಯೋಗಗಳು ಹಾಗೂ ಶೈಕ್ಷಣಿಕ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜಾ ಅಧ್ಯಕ್ಷತೆ ವಹಿಸಿದ್ದರು. ಡೆಪ್ಯುಟಿ ರಿಜಿಸ್ಟ್ರಾರ್ ಡಾ. ಕವಿತಾ ಕಾಮತ್, ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಡಾ. ಕಿರಣ್ ಐತಾಳ್, ಪರೀಕ್ಷಾ ನಿಯಂತ್ರಕ ಡಾ. ಪ್ರಶಾಂತ್ ವಿ., ಪ್ರಥಮ ವರ್ಷದ ಬಿ.ಟೆಕ್ ಸಂಯೋಜಕಿ ಡಾ. ಸುಮಶ್ರೀ ಪಿ. ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಹಿತಾ ಡಿ. ಶೆಟ್ಟಿ ಉಪಸ್ಥಿತರಿದ್ದರು.































