
ಬೆಂಗಳೂರು, ಜು.೫: ಇಎಸ್‌ಐಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ರಾಜಾಜಿನಗರ, ಬೆಂಗಳೂರಿನಲ್ಲಿ “ಮುಖವಾಡದ ಹಿಂದೆ: ವೈದ್ಯರಿಗೆ ಆರೈಕೆ ನೀಡುವವರು ಯಾರು?” ಎಂಬ ರಾಷ್ಟ್ರೀಯ ಧ್ಯೇಯವಾಕ್ಯದಡಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಸಾಂಸ್ಕೃತಿಕ ಸಮಿತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮ ಸಮಾಜ ಸೇವೆಯಲ್ಲಿ ವೈದ್ಯರು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಗೌರವಿಸುವ ಜೊತೆಗೆ, ವೈದ್ಯರ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯದ ಮಹತ್ವವನ್ನು ಒತ್ತಿಹೇಳಿತು.
ಈ ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ವೈದ್ಯರು, ಅಧ್ಯಾಪಕರು, ಹಿರಿಯ, ಕಿರಿಯ ರೆಸಿಡೆಂಟ್‌ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯಾಧಿಕಾರಿಗಳು ಹಾಗೂ ಇತರ ಆರೋಗ್ಯ ವೃತ್ತಿಪರರು ಉಪಸ್ಥಿತರಿದ್ದರು. ಮನಮೋಹಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಸೊಗಸಾದ ಹಾಗೂ ಉತ್ಸಾಹಭರಿತ ಆರಂಭವನ್ನು ನೀಡಿತು.
ಇಎಸ್‌ಐಸಿ ದಕ್ಷಿಣ ವಲಯದ ವಲಯ ವೈದ್ಯಕೀಯ ಆಯುಕ್ತರಾದ ಡಾ. ಅಶಿತ್ ಮುಲ್ಲಿಕ್ ಮಾತನಾಡಿ, ವೈದ್ಯರು ಸಮರ್ಪಣೆಯಿಂದ ಸೇವೆ ಸಲ್ಲಿಸುತ್ತಾರೆ. ಕರುಣೆ, ಸ್ಥೈರ್ಯ ಮತ್ತು ಮಾನವಸೇವೆಯತ್ತ ಅವರ ಅಚಲ ಬದ್ಧತೆ ಪ್ರಸಂಶನೀಯ. ವೈದ್ಯಕೀಯ ವೃತ್ತಿಯು ಸೇವಾ ಮನೋಭಾವ, ಸಹಾನುಭೂತಿ, ನೈತಿಕತೆ ಹಾಗೂ ನಿರಂತರ ಕಲಿಕೆಯ ತತ್ವಗಳ ಮೇಲೆ ನಿರ್ಮಿತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿಯಾಗಿ ಆಯೋಜಿಸಲಾದ ಪ್ರಬಂಧ, ಗಾಯನ ಸ್ಪರ್ಧೆ ಹಾಗೂ ಕ್ರೀಡೆಗಳ ವಿಜೇತರನ್ನು ಸನ್ಮಾನಿಸಲಾಯಿತು.
ಡೀನ್ ಡಾ. ಜೀತೇಂದ್ರ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ. ವಿಜಯಕುಮಾರಿ ವಿ., ಉಪ ನಿರ್ದೇಶಕರಾದ ಬೃಜೇಶ್ ಮೀನಾ, ಹಾಗೂ ಶೈಕ್ಷಣಿಕ ನೋಂದಣಾಧಿಕಾರಿ ಡಾ. ಸುಚಿತ್ರ ಉಪಸ್ಥಿತರಿದ್ದರು.






























