Home ಮುಖಪುಟ ಸುದ್ದಿ ಸಂಪುಟ ವಿಸ್ತರಣೆ:ಸಿಎಂ ದೆಹಲಿಗೆ

ಸಂಪುಟ ವಿಸ್ತರಣೆ:ಸಿಎಂ ದೆಹಲಿಗೆ

ಬೆಂಗಳೂರು, ಸೆ. ೨೮- ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ೨ ಸ್ಥಾನಗಳನ್ನು ಭರ್ತಿ ಮಾಡಲು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು-ಉಪಾಧ್ಯಕ್ಷರ ನೇಮಕಾತಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಚರ್ಚೆ ನಡೆಸುವರು.


ನಾಳೆ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಹಾಗೂ ಡಾ. ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ಬರ ಪರಿಹಾರಕ್ಕೆ ಹೆಚ್ಚಿನ ನೆರವು ಕೋರಲು ಸರ್ವಪಕ್ಷ ನಿಯೋಗವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಕರೆದೊಯ್ಯಲಿದ್ದು, ಈ ಸಂದರ್ಭದಲ್ಲಿ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಬಗ್ಗೆಯೂ ಚರ್ಚೆ ನಡೆಸುವರು.


ಇಂದು ಬೆಳಗ್ಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ವಪಕ್ಷ ನಾಯಕರ ಜತೆ ಇಂದು ಮಧ್ಯಾಹ್ನ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವರನ್ನು ಭೇಟಿ ಮಾಡಿ ಡಾ. ಕಸ್ತೂರಿ ರಂಗನ್ ವರದಿ ಜಾರಿ ಮಾಡದಂತೆ ಮನವಿ ಸಲ್ಲಿಸುವರು.
ಇದಾದ ಬಳಿಕ ಬರಕ್ಕೆ ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವರು.


ನಾಳೆ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ನಾಳೆ ರಾತ್ರಿ ಅವರು ಬೆಂಗಳೂರಿಗೆ ವಾಪಸ್ಸಾಗುವರು.


ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗದಲ್ಲಿ ತಾವು ಹೋಗಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಈಗಾಗಲೇ ಹೇಳಿ, ಡಾ. ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧಿಸಿ ತೆರಳುವ ಸರ್ವಪಕ್ಷದ ನಿಯೋಗದಲ್ಲಿ ಭಾಗಿಯಾಗುವುದಾಗಿ ಸ್ಪಷ್ಟಪಡಿಸಿವೆ.


ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಡಾ. ಕಸ್ತೂರಿ ರಂಗನ್ ವರದಿ ಒಪ್ಪುವುದಿಲ್ಲ. ಈ ವರದಿಯನ್ನು ಜಾರಿ ಮಾಡಬಾರದು ಎಂದು ರಾಜ್ಯ ಸರ್ಕಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿದೆ.


ವಿಧಾನಸಭೆಯ ನಿರ್ಣಯವನ್ನು ಕೇಂದ್ರ ಸಚಿವರ ಗಮನಕ್ಕೆ ಸರ್ವಪಕ್ಷ ತರಲಿದ್ದು, ಕಸ್ತೂರಿ ರಂಗನ್ ವರದಿ ಜಾರಿಯಿಂದ ಪಶ್ಚಿಮ ಘಟ್ಟಜದ ಜನ ಜೀವನಕ್ಕೆ ಆಗುವ ತೊಂದರೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು.

ಸಿದ್ದರಾಮಯ್ಯ ಸಹ ದೆಹಲಿಗೆ

ದೆಹಲಿಯಲ್ಲಿ ನಾಳೆ ನಡೆಯಲಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇಂದು ಮಧ್ಯಾಹ್ನ ದೆಹಲಿಗೆ ತೆರಳಿದರು.


ಇಂದು ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ ಅವರು ಸಹ ವರಿಷ್ಠ ನಾಯಕರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು, ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳ ಭರ್ತಿ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.